ಬೆಂಗಳೂರು: ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾದ ಬೆನ್ನಲ್ಲೇ ನಮ್ಮ ಕರ್ನಾಟಕದ ಬಂಗಾರದ ನಂಟಿನ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಉತ್ತರಪ್ರದೇಶದಲ್ಲಿ ನಿಕ್ಷೇಪ ಪತ್ತೆಯಾಗಿದ್ದರೂ ಕರ್ನಾಟಕ ಇಂದಿಗೂ ಚಿನ್ನದ ಭೂಮಿ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದು ರಾಜ್ಯ ಭೂ ವಿಜ್ಞಾನಿ ಡಾ.ಬಿ.ಎಸ್.ಪ್ರಕಾಶ್ ಅವರ ದೃಢ ವಿಶ್ವಾಸ.
ಸರಿಸುಮಾರು 20 ವರ್ಷ ರಾಜ್ಯದ ಕಾಡುಮೇಡು, ಹಳ್ಳಿಗಳನ್ನು ಸುತ್ತಿ ಚಿನ್ನದ ನಿಕ್ಷೇಪಗಳನ್ನು ಗುರುತಿಸಿರುವ ಅವರು ರಾಜ್ಯದ ‘ಬಂಗಾರದ ನಿಧಿ’ಗಳ ಬಗ್ಗೆ ವಿಸ್ತಾರವಾಗಿ ಬೆಳಕು ಚೆಲ್ಲಿದ್ದಾರೆ. ‘ಕಳೆದ 40 ವರ್ಷದಿಂದ ಪ್ರತಿ ವರ್ಷ ನಿರಂತರವಾಗಿ ವಿವಿಧೆಡೆ ನೂರು ಮೀಟರ್ವರೆಗೆ ಡ್ರಿಲ್ ಮಾಡಿ ಅಧ್ಯಯನ ಮಾಡಿದ ಬಳಿಕ ರಾಜ್ಯದ ನೂರಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಚಿನ್ನ ಇರುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಅಧ್ಯಯ ನದ ಅಂಕಿಅಂಶಗಳನ್ನೇ ಆಧಾರವಾಗಿಟ್ಟುಕೊಂಡರೆ ಸರಾಸರಿ 1 ಸಾವಿರ ಟನ್ ಚಿನ್ನ ರಾಜ್ಯದಲ್ಲಿದೆ. 100 ಮೀಟರ್ಗಿಂತ ಹೆಚ್ಚು ಅಂದರೆ 1 ಕಿ.ಮೀ ವರೆಗಿನ ಲೆಕ್ಕವನ್ನು ಪರಿಗಣಿಸಿದರೆ ಈ ಪ್ರಮಾಣ ಊಹಿಸದಷ್ಟು’ ಎಂದು ಅವರು ಖಚಿತವಾಗಿ ಹೇಳುತ್ತಾರೆ.
‘ನನ್ನ ಅನುಭವದ ಪ್ರಕಾರ ಉತ್ತರ ಪ್ರದೇಶಕ್ಕಿಂತಲೂ ಹೆಚ್ಚು ಚಿನ್ನ ಕರ್ನಾಟಕದಲ್ಲಿದೆ. ಸದ್ಯ ಗುರುತಿಸಿರುವ ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದ ಡ್ರಿಲ್ ಮಾಡಿದರೆ ಇದು ಸ್ಪಷ್ಟವಾಗುತ್ತದೆ’ ಎಂದು ತಿಳಿಸಿದ್ದಾರೆ.
ಭೂವಿಜ್ಞಾನ ಸರ್ವೆಕ್ಷಣ ಇಲಾಖೆಯಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿರುವ ಪ್ರಕಾಶ್ ಈಗ ನಿವೃತ್ತರಾಗಿದ್ದರೂ, ಸಂಶೋಧನೆ, ಅಧ್ಯಯನವನ್ನು ಬಿಟ್ಟಿಲ್ಲ.
ದೇಶಕ್ಕೆ ಮತ್ತು ಕರ್ನಾಟಕಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಿರುವ ಈ ಸಂದರ್ಭದಲ್ಲಿ ಚಿನ್ನದ ನಿಕ್ಷೇಪ ಬಳಸಿಕೊಂಡು ಕೊರತೆಗಳನ್ನು ನೀಗಿಸಿಕೊಳ್ಳಲು ಅವಕಾಶವಿದೆ. ಆದರೆ, ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ. ಇದರ ಹಿಂದೆ ವಿದೇಶಿ ಲಾಬಿಯೂ ಇರಬಹುದು ಎಂದು ಅವರು ಅನುಮಾನಿಸುತ್ತಾರೆ.
ಲೆಕ್ಕಾಚಾರವೇನು?: ಕರ್ನಾಟಕದಲ್ಲಿ ಹಟ್ಟಿ ಚಿನ್ನದ ಗಣಿ ಬಿಟ್ಟು ಬೇರೆಡೆ ಚಿನ್ನದ ಉತ್ಪತ್ತಿ ಇಲ್ಲ. ಅಲ್ಲಿ ವಾರ್ಷಿಕ ಸರಾಸರಿ 3 ಸಾವಿರ ಕೆಜಿಯಷ್ಟು ಉತ್ಪಾದನೆ ಇದ್ದು, ಈ ಬಾರಿ 3500 ಕೆಜಿಗೆ ವಿಸ್ತರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕೆಜಿಎಫ್ನಲ್ಲಿ ಉತ್ಪಾದನೆ ನಿಂತುಹೋಗಿದೆ. ಹಟ್ಟಿ ಬಿಟ್ಟು ಉಳಿದ ಕಡೆ ಇರುವ ಘಟಕಗಳು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಆದರೆ, ಅಂಥಲ್ಲಿ ಹೊಸ ಘಟಕ ಹಾಕಿದರೆ ಲಾಭದಾಯಕ ಉದ್ಯಮವಾಗಿ ಮಾಡಲು ಅವಕಾಶವಿದೆ. 10 ಗಣಿಯಲ್ಲಿ ಒಂದು ಗಣಿಯಲ್ಲಿ ಪಕ್ವ ಚಿನ್ನದಂಶ ಸಿಕ್ಕರೆ ಉದ್ಯಮ ಲಾಭದಾಯಕ. ಪ್ರತಿ ಟನ್ ಅದಿರಿನಲ್ಲಿ 4 ಗ್ರಾಂ ಚಿನ್ನ ಸಿಕ್ಕರೂ ಲಾಭಕರ. 6 ಗ್ರಾಂವರೆಗೂ ಚಿನ್ನ ತೆಗೆಯುವ ಅವಕಾಶ ನಮ್ಮಲ್ಲಿ ಸಾಧ್ಯವಾಗಲಿದೆ ಎಂದು ಅವರು ತಿಳಿಸುತ್ತಾರೆ.
ತಂತ್ರಜ್ಞಾನ ಬಳಸಿಕೊಳ್ಳಿ: ವಿಜ್ಞಾನಿ ಪ್ರಕಾಶ್ ಪ್ರಕಾರ ಚಿನ್ನ ತೆಗೆಯುವ ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸತನಗಳು ಬಂದಿವೆ. ಪರಿಸರಕ್ಕೆ ಹಾನಿಯಾಗದಂತೆ, ವೆಚ್ಚ ಕಡಿಮೆ ಮಾಡಿ ಉತ್ಪತ್ತಿ ಹೆಚ್ಚಿಸುವ ತಂತ್ರಜ್ಞಾನವಿದೆ. ಅದನ್ನು ಬಳಸಿ ಇತಿಮಿತಿಯಲ್ಲಿ ಚಿನ್ನ ತೆಗೆದರೆ ಯಾರಿಗೂ ತೊಂದರೆ ಇಲ್ಲ, ಖನಿಜವೂ ಸದ್ಬಳಕೆಯಾಗುತ್ತದೆ. ಸರ್ಕ್ಯುಲರ್ ಶಾಫ್ಟ್ ಮೂಲಕ ಟನಲ್ನಲ್ಲಿ 6 ಮೀಟರ್ ಒಳಗೆ ಹೋಗಿ ಸಮತಲ ಡ್ರಿಲ್ಲಿಂಗ್ ಮಾಡಬಹುದು ಎಂದು ವಿವರಿಸುತ್ತಾರೆ.
ಹೂಡಿಕೆದಾರರು ಯಾರು?: ಚಿನ್ನದ ನಿಕ್ಷೇಪಗಳನ್ನು 50 ವರ್ಷ ಲೀಸ್ಗೆ ಕೊಡುವ ಪದ್ಧತಿ ಇದ್ದು, ವಿದೇಶಿ ಹೂಡಿಕೆದಾರರು ಹೂಡಿಕೆ ಮಾಡಲು ಸಿದ್ಧರಿದ್ದಾರೆ. ಆದರೆ, ಕೆಲವೊಂದು ಸಮಸ್ಯೆ ಇವೆ ಎನ್ನಲಾಗಿದೆ. ನೀತಿ, ನಿಯಮಗಳಲ್ಲಿ ಒಂದಷ್ಟು ಬದಲಾವಣೆ ಅಗತ್ಯವಿದೆ ಮತ್ತು ಈ ಹಿಂದೆ ನಡೆಸಿರುವ ಅಧ್ಯಯನದಲ್ಲಿ ಒಂದಷ್ಟು ಪ್ಯಾರಾ ಮೀಟರ್ನಡಿ ಪುನರ್ ಅಧ್ಯಯನ ನಡೆಸಬೇಕು. ಆ ಮೂಲಕ ಸ್ಪಷ್ಟತೆ ಇಟ್ಟುಕೊಂಡರೆ ಖಂಡಿತವಾಗಿ ಹೂಡಿಕೆದಾರರು ಮುಂದೆ ಬರುತ್ತಾರೆ ಎಂಬ ವಾದವಿದೆ. ಇಂಥ ಆರ್ಥಿಕ ಪರಿಸ್ಥಿತಿಯಲ್ಲಿ ಈ ಅವಕಾಶ ಬಳಸಿಕೊಂಡರೆ ಒಂದಷ್ಟು ಹೊರೆ ಕಡಿಮೆಯಾಗಲಿದೆ. ಆದರೆ, ನಮ್ಮ ಮನೆಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲ ಹುಡುಕಾಡುತ್ತೇವೆ ಎಂದು ಪ್ರಕಾಶ್ ವಿಶ್ಲೇಷಿಸುತ್ತಾರೆ.
ವಾದವೇನು?
ಪ್ರಮುಖ ಸ್ಥಳಗಳಿವು..
ಪ್ರತಿ ವರ್ಷ ಭಾರತ ಸುಮಾರು ಒಂದು ಸಾವಿರ ಟನ್ ಚಿನ್ನ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ಅಪಾರ ಪ್ರಮಾಣದಲ್ಲಿ ನಮ್ಮ ಹಣ ವಿದೇಶಕ್ಕೆ ಹೋಗುತ್ತಿದೆ. ಇಂಧನ ಸೇರಿ ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ಅವಲಂಬನೆ ಕಡಿಮೆ ಆಗಬೇಕೆನ್ನುವ ಸರ್ಕಾರ, ನಮ್ಮ ಪ್ರಕೃತಿಯಲ್ಲೇ ಇರುವ ಚಿನ್ನದ ಬಗ್ಗೆ ಯೋಚಿಸಿದರೆ ಉತ್ತಮ. | ಡಾ.ಬಿ.ಎಸ್.ಪ್ರಕಾಶ್ ರಾಜ್ಯ ಭೂ ವಿಜ್ಞಾನಿ
| ಶ್ರೀಕಾಂತ ಶೇಷಾದ್ರಿ