ಕೊಳ್ಳೇಗಾಲ ಲಿಂಗಾಣಪುರ ರಸ್ತೆಯಲ್ಲಿರುವ ಆಗಸ್ಟೀನ್ ಕಾಲನಿ ಕ್ರಾಸ್ ಬಳಿ ಬಿದ್ದಿರುವ ಗುಂಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. 
ಜಿಲ್ಲೆ

ಅಪಾಯಕ್ಕೆ ಆಹ್ವಾನ ನೀಡುತ್ತಿವೆ ದೊಡ್ಡ ಗುಂಡಿಗಳು

ರವಿಕುಮಾರ್ ಪಿ. ಕೆ

ಕೊಳ್ಳೇಗಾಲ: ಪಟ್ಟಣದ ಲಿಂಗಣಾಪುರ ಮುಖ್ಯರಸ್ತೆಯ ಮಾರ್ಗಮಧ್ಯೆ ಸಿಗುವ ಆಗಸ್ಟೀನ್ ಕಾಲನಿ ಕ್ರಾಸ್ ಬಳಿ ದೊಡ್ಡ ಗುಂಡಿ ನಿರ್ಮಾಣವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

22ನೇ ವಾರ್ಡ್ ಮತ್ತು ಹಾಗೂ 24ನೇ ವಾರ್ಡ್ ವ್ಯಾಪ್ತಿಯ ನಡುವೆ ಬಿದ್ದ ಗುಂಡಿ ಇದಾಗಿದ್ದು, ರಸ್ತೆಯಲ್ಲಿ ನಿತ್ಯವೂ ಲಾರಿ, ಕಾರು, ಆಟೋ, ಬೈಕ್ ಸೇರಿದಂತೆ ಇನ್ನಿತರ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ. ಆಗಸ್ಟೀನ್ ಕಾಲನಿ, ಆಶ್ರಯ ಬಡಾವಣೆ, ವಿದ್ಯಾನಗರ, ಆದರ್ಶನಗರ, ಲಿಂಗಣಾಪುರ, ಸಿದ್ದಯ್ಯನಪುರ, ಗ್ರಾಮಕ್ಕೆ ತೆರಳುವ ಜನರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ.

ಆದರೆ, ಕಳೆದ ಎರಡ್ಮೂರು ತಿಂಗಳಿನಿಂದ ಆಗಸ್ಟೀನ್ ಕಾಲನಿ ಬಳಿ ತಿರುವಿನಲ್ಲಿ ಗುಂಡಿ ನಿರ್ಮಾಣವಾಗಿದ್ದು ಸಂಚಾರಿಗಳು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಕಿರಿದಾಗಿರುವುದರ ಜತೆಗೆ ರಸ್ತೆ ಮಧ್ಯೆದಲ್ಲಿ ಐದಾರು ಅಡಿ ಅಗಲಕ್ಕೆ ಗುಂಡಿ ಬಿದ್ದಿರುವುದ್ದರಿಂದ ಗುಂಡಿ ತಪ್ಪಿಸಲು ಹೋಗಿ ಬೈಕ್, ಸೈಕಲ್ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಆದರೂ, ಈ ಗುಂಡಿಗೆ ನಗರಸಭೆ ಅಧಿಕಾರಿಗಳು ತೇಪೆ ಹಾಕುವ ಕೆಲಸ ಮಾಡಿಲ್ಲ. ಸ್ಥಳೀಯ ವಾರ್ಡ್ ಸದಸ್ಯರು ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಕಾಳಜಿ ವಹಿಸಿ ರಸ್ತೆ ದುರಸ್ತಿಗೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಅಕ್ರೋಶ ಹೊರಹಾಕುತ್ತಿದ್ದಾರೆ.

ಮಳೆ ಬಿದ್ದರಂತೂ ಗುಂಡಿ ತುಂಬ ಸಂಪೂರ್ಣ ನೀರು ಭರ್ತಿ ಆಗಲಿದ್ದು. ಗುಂಡಿ ಗೋಚರವಾಗದೆ ಬೈಕ್ ಸವಾರರು ಆಯತಪ್ಪಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಹಾಗಾಗಿ ಕೂಡಲೇ ಸಂಬಂಧಪಟ್ಟವರು ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ.