Laptop and computer distribution program  
ಜಿಲ್ಲೆ

ಮಹನೀಯರ ಬಲಿದಾನ ಸ್ಮರಿಸೋಣ

ಶಿವರಾಜ.ಎಂ

ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್ ಕಿವಿಮಾತು


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದೇಶದ ಮಹನೀಯರ ತ್ಯಾಗ, ಬಲಿದಾನಗಳನ್ನು ನಿತ್ಯ ಸ್ಮರಿಸುವ ಮೂಲಕ ಹಿರಿಯ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್ ತಿಳಿಸಿದರು.
ನಗರದ ನಗರಸಭೆ ಕಾರ್ಯಾಲಯದ ಅವರಣದಲ್ಲಿ ನಗರಸಭೆಯಿಂದ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಲ್ಯಾಪ್‌ಟ್ಯಾಪ್ ಹಾಗೂ ಕಂಪ್ಯೂಟರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಹಿಂಸೆ ಹಾಗೂ ಶಾಂತಿ ಮಂತ್ರದಿಂದಲೇ ಬ್ರಿಟಿಷರು ದೇಶ ಬಿಟ್ಟುಹೋಗುವಂತೆ ಮಾಡಿದವರು ಗಾಂಧಿ ಅವರ ಶಾಂತಿಯ ತತ್ವ, ನಾಯಕತ್ವ ಗುಣ ಅನುಸರಣೀಯ. ಗಾಂಧಿ ಹಾಗೂ ಶಾಸ್ತ್ರಿ ಅವರಂತಹ ಮಹನೀಯರ ಜೀವನ ಚರಿತ್ರೆಯನ್ನು ಯುವಜನತೆ ಅಧ್ಯಯನ ಮಾಡಬೇಕು ಎಂದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರದೀಪ್ ಮಾತನಾಡಿ, ಗಾಂಧಿ ಜಯಂತಿ ಆಚರಿಸುವುದಕ್ಕಿಂತಲೂ ಬಾಪೂಜಿ ಅವರ ತತ್ವಾದರ್ಶ ಮೈಗ್ಗೂಡಿಸಿಕೊಳ್ಳುವುದು ಮುಖ್ಯ. ಅಧುನಿಕ ಸಮಾಜದಲ್ಲಿ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಮೌಲ್ಯ ಕಣ್ಮರೆಯಾಗುತ್ತಿದೆ. ಪಾಲಕರು ಮಕ್ಕಳಿಗೆ ಮಹನೀಯರ ಆದರ್ಶದೊಂದಿಗೆ ಮಾನವೀಯ ಗುಣ ಬೆಳೆಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿರುವ ಪ್ರತಿಭಾವಂತ ಶಿಕ್ಷಕರನ್ನು ಬಿಟ್ಟು, ಪಾಲಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿರುವುದು ಸಮಂಜಸವಲ್ಲ. ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಗರಸಭೆಯಿಂದ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಡಿ.ಲೋಹಿತ್ ಮಾತನಾಡಿ, 1909ರ ಸಂದರ್ಭ ದೇಶದಲ್ಲಿ ಗಾಂಧಿಯುಗ ಆರಂಭವಾಗಿದ್ದು, ಗಾಂಧಿ ಅವರು ಮೊದಲು ದೇಶವನ್ನು ಒಗ್ಗೂಡಿಸಿ, ಸಮ ಸಮಾಜ ನಿರ್ಮಾಣ ಗುರಿ ಹೊಂದಿದ್ದರು ಎಂದರು.
ಪ್ರತಿಯೊಬ್ಬರೂ ಗಾಂಧಿ ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕಿದೆ. 1948ರಲ್ಲಿ ಗಾಂಧಿ ಅವರು ಮೃತಪಟ್ಟ ನಂತರ ವಿಶ್ವದ 192ದೇಶಗಳ ಆಯಾ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ, ಗೌರವಿಸಿದ್ದಾರೆ. ಗಾಂಧಿ ಪರಿಕಲ್ಪನೆಯ ಗ್ರಾಮ ಸ್ವರಾಜ್ ಯೋಜನೆಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ 12 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ನಗರಸಭೆ ವ್ಯಾಪ್ತಿಯ 25 ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮಾಡಲಾಯಿತು.
ನಗರಸಭೆ ಸದಸ್ಯರಾದ ಎನ್.ಗಣೇಶ್, ಶಿವಕುಮಾರ್, ಅಂಜಿನಪ್ಪ, ಜಿ.ಆನಂದ್, ಸುನೀಲ್‌ಮೂಡ್, ಪೂರ್ಣಿಮಾ ಸುಗ್ಗರಾಜು, ಲೋಲಾಕ್ಷಿಗಂಗಾಧರ್, ಹೆಚ್ಚುವರಿ ಸದಸ್ಯರಾದ ಆಂಜನಾಮೂರ್ತಿ, ಮುನಿರಾಜು, ನಗರಸಭೆ ವ್ಯವಸ್ಥಾಪಕ ಮುಮ್ತಾಸ್, ಕಾರ್ಯಪಾಲ ಅಭಿಯಂತ ನಾಗಲಿಂಗ ಬಡಿಗೇರ್, ಸಮುದಾಯ ಸಂಘಟಕ ನಾರಾಯಣ್‌ಸ್ವಾಮಿ, ಆರೋಗ್ಯ ನಿರೀಕ್ಷಕಿ ಬಿಜಿ, ಮಮತಾ, ರವಿಕುಮಾರ್ ಮತ್ತಿತರರು ಇದ್ದರು.