ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕಂಠದ ಸಮಸ್ಯೆ ಇರುವ ಇಬ್ಬರು ಮಹಿಳೆಯರಿಗೆ ಲ್ಯಾಪ್ರೋ ಸ್ಕೋಪಿಕ್ ಹಿಸ್ಟರೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಇಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ಅರಿವಳಿಕೆ ತಜ್ಞರ ತಂಡ ಶಸ್ತ್ರಚಿಕಿತ್ಸೆ ನಡೆಸಿದರು. ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ಮಹಿಳೆಯರು ಅತಿ ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಆಗಿದ್ದಾರೆ.
ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಕೀಹೋಲ್ ಸರ್ಜರಿ ಎಂದೂ ಕರೆಯಲಾಗುತ್ತದೆ. ಟೆಲಿಸ್ಕೋಪ್ ಮತ್ತು ಸಣ್ಣ ವಿಡಿಯೋ ಕ್ಯಾಮರಾ ಹೊಂದಿರುವ ಸಣ್ಣಟ್ಯೂಬ್ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಅತಿ ಚಿಕ್ಕ ಗಾಯವಾಗುವುದರಿಂದ ರೋಗಿ ಬಹಳ ಬೇಗನೇ ಚೇತರಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ಸೋಂಕಿನ ಅಪಾಯ ಕಡಿಮೆ ಇರುತ್ತದೆ.
ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಮೂರು ಮಂದಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಲಭ್ಯವಿದ್ದು, ಇಲ್ಲಿ ಇದುವರೆಗೆ ಬಹಳಷ್ಟು ಮಂದಿಗೆ ಗರ್ಭಕೋಶದ ಗೆಡ್ಡೆಯ ಶಸ್ತ್ರಚಿಕಿತ್ಸೆ ಮತ್ತು ಗರ್ಭಕಂಠದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಗರ ಪ್ರದೇಶದ ಆಸ್ಪತ್ರೆಗಳಿಗೆ ಹೋಲಿಸಿದರೆ ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ.ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ ಹಾಗೂ ಡಿ.ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.