ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕಂಠದ ಸಮಸ್ಯೆ ಇರುವ ಇಬ್ಬರು ಮಹಿಳೆಯರಿಗೆ ಲ್ಯಾಪ್ರೋಸ್ಕೋಪಿಕ್ ಹಿಸ್ಟರೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಪ್ರಿಯಾಂಕ ಜಯದೇವ, ಶಸ್ತ್ರಚಿಕಿತ್ಸಾ ತಜ್ಞ ಡಾ.ಕಿರಣ್ ಕುಮಾರ್, ಅರಿವಳಿಕೆ ತಜ್ಞ ಡಾ.ಸುಪ್ರೀತ್ ಆರ್.ಶೆಟ್ಟಿ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ಮಹಿಳೆಯರು ಅತಿ ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಆಗಿದ್ದಾರೆ.
ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಕೀಹೋಲ್ ಸರ್ಜರಿ ಎಂದು ಕರೆಯಲಾಗುತ್ತದೆ. ಟೆಲಿಸ್ಕೋಪ್, ಸಣ್ಣ ವಿಡಿಯೋ ಕ್ಯಾಮರಾ ಹೊಂದಿರುವ ಸಣ್ಣಟ್ಯೂಬ್ ಮೂಲಕ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಅತಿ ಚಿಕ್ಕ ಗಾಯವಾಗುವುದರಿಂದ ರೋಗಿ ಬಹಳ ಬೇಗನೆ ಚೇತರಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕಡಿಮೆ ನೋವು, ಕಡಿಮೆ ರಕ್ತಸ್ರಾವ, ಸೋಂಕಿನ ಅಪಾಯ ಕಡಿಮೆ ಇರುತ್ತದೆ.
ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಮೂವರು ಪ್ರಸೂತಿ, ಸ್ತ್ರೀರೋಗ ತಜ್ಞರು ಲಭ್ಯವಿದ್ದು, ಇಲ್ಲಿ ಇದುವರೆಗೆ ಬಹಳಷ್ಟು ಮಂದಿಗೆ ಗರ್ಭಕೋಶದ ಗೆಡ್ಡೆ ಶಸ್ತ್ರಚಿಕಿತ್ಸೆ, ಗರ್ಭಕಂಠದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನಗರ ಪ್ರದೇಶದ ಅಸ್ಪತ್ರೆಗಳಿಗೆ ಹೋಲಿಸಿದರೆ ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.