ಜಿಲ್ಲೆ

ಲ್ಯಾನ್ಸ್‌ಡೌನ್ ಸಾಮರ್ಥ್ಯ ಪರೀಕ್ಷಿಸಿದ ಜನತೆ

Mysuru

ಮೈಸೂರು: ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳು ಶಿಥಿಲಾವಸ್ಥೆಯಿಂದ ಕೂಡಿದ್ದು, ಮರು ನಿರ್ಮಾಣ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸರ್ಕಾರ ಹೊಂದಿದೆ. ಆದರೆ, ಯಾವುದೇ ಅಪಾಯವನ್ನು ಲೆಕ್ಕಿಸದೆ ಜನರು ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಕಟ್ಟಡ ಏರಿ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು. ಅದಾದ ನಂತರ ಇದೀಗ ಸಾರ್ವಜನಿಕ ವಲಯದಲ್ಲಿ ಈ ಕಟ್ಟಡದ ಸಾಮರ್ಥ್ಯದ ಕುರಿತು ಚರ್ಚೆ ಪ್ರಾರಂಭವಾಗಿದೆ.

ಈ ಕಟ್ಟಡಗಳು ಕುಸಿದು ಬೀಳುವ ಹಂತದಲ್ಲಿದೆ ಎಂದು ಸರ್ಕಾರ ಕಳೆದ ಒಂದು ದಶಕದಿಂದ ಬಿಂಬಿಸುವ ಕಾರ್ಯ ಮಾಡುತ್ತಿದೆ. ಈ ಒಂದು ದಶಕದ ಅವಧಿಯಲ್ಲಿ ಹಲವು ಗಾಳಿ, ಮಳೆಯ ಒಡೆತವನ್ನು ಕಟ್ಟಡಗಳು ಎದುರಿಸಿವೆ. ಹೀಗಾಗಿ ಈ ಕಟ್ಟಡಗಳು ಕುಸಿದು ಬೀಳುವ ಆತಂಕ ಜನರಲ್ಲೂ ಇತ್ತು. ಆದರೆ, ಸಾವಿರಾರು ಜನರು ಈ ಕಟ್ಟಡದ ಮೇಲೆ ಕುಳಿತು ಜಂಬೂಸವಾರಿ ವೀಕ್ಷಿಸಿರುವುದು ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದೆ.

ಈಗಾಗಲೇ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದೆ. ಇದಕ್ಕೆ ಜಿಲ್ಲಾ ಪಾರಂಪರಿಕ ಸಮಿತಿ ಗ್ರೀನ್ ಸಿಗ್ನಲ್ ಸಹ ನೀಡಿದೆ. ಇದಕ್ಕೆ ಹೈಕೋರ್ಟ್‌ನ ಒಪ್ಪಿಗೆ ಸಿಗುವುದು ಮಾತ್ರ ಬಾಕಿ ಉಳಿದಿದೆ. ಒಂದುವೇಳೆ ದೇವರಾಜ ಮಾರುಕಟ್ಟೆ ನೆಲಸಮವಾದರೆ ಮುಂದೆ ಲ್ಯಾನ್ಸ್‌ಡೌನ್ ಕಟ್ಟಡ ಸಹ ನೆಲಸಮ ಗೊಳ್ಳಲಿದೆ.

ಈ ಎರಡು ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸುವುದಕ್ಕೆ ಮೈಸೂರು ರಾಜಮನೆತನದಿಂದಲೇ ವಿರೋಧ ವ್ಯಕ್ತವಾಗಿದೆ. ಪಾರಂಪರಿಕ ಕಟ್ಟಡಗಳನ್ನು ಇರುವ ಸ್ಥಿತಿಯಲ್ಲಿಯೇ ಅಭಿವೃದ್ಧಿ ಪಡಿಸಬಹುದು ಎಂಬುದು ರಾಜಮನೆತನ ಹಾಗೂ ನಗರದ ಪಾರಂಪರಿಕ ತಜ್ಞರ ಅಭಿಪ್ರಾಯವಾಗಿದೆ.

ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23,24 ರಂದು ಸುರಿದ ಧಾರಾಕಾರ ಮಳೆಗೆ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಮೇಲ್ಛಾವಣಿ ಕುಸಿದಿತ್ತು. 11 ಜನವರಿ 2015 ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 28 ಆಗಸ್ಟ್ 2016 ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವನ್ನು ಕೈ ಬಿಡಲಾಯಿತು.