ಚಿಕ್ಕಮಗಳೂರು: ನಾಡಿನಲ್ಲಿ ಕಲೆ, ಸಂಸ್ಕೃತಿ ಪರಂಪರೆ ಉಳಿಸಿ, ಬೆಳೆಸುವಲ್ಲಿ ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣದೇವರಾಯನ ಕೊಡುಗೆ ಅಪಾರ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಹೇಳಿದರು.
ನಗರದ ಕರವೇ ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣ ದೇವರಾಯನ 550ನೇ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡು ಕಂಡ ಶ್ರೇಷ್ಠ ದೊರೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣದೇವರಾಯರು ಕೂಡ ಒಬ್ಬರು. ಅವರ ಆಡಳಿತಾವಧಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಅತ್ಯಂತ ಸಂಪದ್ಭರಿತವನ್ನಾಗಿಸಿದ್ದರು. ತುಳುವ ವಂಶದ ಶ್ರೇಷ್ಠ ಆಡಳಿತ ನೀಡಿ ಕಲೆ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿಯನ್ನು ಪೋಷಿಸುತ್ತ ಪ್ರಾಧಾನ್ಯತೆ ನೀಡಿದ್ದರು. ಕನ್ನಡದಲ್ಲಿ ರಾಜಮುದ್ರಿಕೆ ಹಾಗೂ ಶಾಸನಗಳನ್ನು ಬರೆಸುವ ಮೂಲಕ ಕನ್ನಡತನ ಉಳಿಸಲು ಶ್ರಮಿಸಿದವರು ಎಂದರು.
ವಿಜಯನಗರ ಸಾಮಾಜ್ಯದಲ್ಲಿ ವಿರೂಪಾಕ್ಷ ದೇವಾಲಯ ಒಳಗೊಂಡಂತೆ ಅನೇಕ ದೇವಾಲಯಗಳಲ್ಲಿ ಕನ್ನಡದಲ್ಲಿ ಶಾಸನ ಬರೆಸಿ ಅದನ್ನು ಪೋಷಣೆ ಮಾಡಿದ್ದರು. ಆದ್ದರಿಂದಲೇ ಅವರಿಗೆ ಕರ್ನಾಟಕ ರಮಾರಮಣ ಎನ್ನುವ ಬಿರುದು ನೀಡಲಾಗಿತ್ತು. ಕನ್ನಡವನ್ನು ಶ್ರೀಮಂತಗೊಳಿಸಿದ ಅರಸು ಶ್ರೀ ಕೃಷ್ಣದೇವರಾಯನ ಜಯಂತ್ಯುತ್ಸವನ್ನು ಸರ್ಕಾರವು ಪ್ರತಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಚರಿಸಬೇಕು. ಜತೆಗೆ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುವಂತೆ ಆಗ್ರಹಿಸಿದರು.