ಜಿಲ್ಲೆ

ಕೊಡವ ಸಂಸ್ಕೃತಿ ಬೆಳವಣಿಗೆಗೆ ಭಾಷೆ ಅತಿಮುಖ್ಯ; ಎಂ.ಪಿ.ಮುತ್ತಪ್ಪ


ಮಡಿಕೇರಿ: ಕೊಡವ ಸಂಸ್ಕೃತಿ ಬೆಳವಣಿಗೆಗೆ ಭಾಷೆ ಅತಿಮುಖ್ಯ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ.ಪಿ.ಮುತ್ತಪ್ಪ ಹೇಳಿದರು.


ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎಂ.ಎ. ಕೊಡವ ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಇವರ ಸಹಯೋಗದಲ್ಲಿ ಸೋಮವಾರ "ಕೊಡವ ವ್ಯಾಕರಣ ಪುಸ್ತಕ ಬಿಡುಗಡೆ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕೊಡವ ಜನಾಂಗ ಮಾತ್ರವಲ್ಲದೆ ಕೊಡವ ಸಂಸ್ಕೃತಿಯೂ ಉಳಿಯಬೇಕಾದರೆ ಭಾಷೆ ಬಹಳ ಮುಖ್ಯ. ಕೊಡವ ಭಾಷೆ ಉಳಿಯಬೇಕಾದರೆ ವ್ಯಾಕರಣವೂ ಒಂದು ಭಾಗವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮೊದಲ ಬಾರಿಗೆ ಕೊಡವ ವ್ಯಾಕರಣ ಪುಸ್ತಕವನ್ನು ಬೆಳಕಿಗೆ ತಂದಿರುವುದು ಒಂದು ಹೆಮ್ಮೆಯ ವಿಷಯ. ಹಾಗೂ ದೀಪಬೆಳಗುತ್ತಿರುವ ಹಾಗೆ ಕೊಡವ ಭಾಷೆ ಬೆಳೆಯಲಿ, ಉಳಿಯಲಿ ಎಂದು ಆಶಿಸಿದರು.


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಕೊಡವ ಭಾಷೆ ಬಹಳ ಮುಖ್ಯ. ಇದಕ್ಕೆ ವ್ಯಾಕರಣ ಬಹಳ ಮುಖ್ಯ. ಈಗಿನ ಜನಾಂಗದವರು ಎಲ್ಲಾ ಭಾಷೆಗಳನ್ನು ಮಿಶ್ರಿತವಾಗಿ ಬಳಸಿಕೊಂಡು ಮಾತನಾಡುತ್ತಾ ನಮ್ಮ ಸಂಸ್ಕೃತಿಗೆ ದಕ್ಕೆ ಉಂಟುಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಎಲ್ಲರೂ ಮಾತೃ ಭಾಷೆಯನ್ನು ಬೆಳೆಸಲು ಪ್ರಯತ್ನಿಸಬೇಕು ಎಂದು ಹೇಳಿದರು.


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಚೌರೀರ ಜಗತ್ ತಿಮ್ಮಯ್ಯ ಮಾತನಾಡಿ, ತಮ್ಮ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯ. ಇನ್ನೂ ಹೆಚ್ಚು ಇಂತಹ ಸ್ಫೂರ್ತಿದಾಯಕ ಕಾರ್ಯಕ್ರಮಗಳು ನಡೆಯಲಿ. ಯುವಪ್ರತಿಭೆಗಳಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಸುಮಾರು ಐವತ್ತು ವರುಷದವರೆಗೆ ಯಾರು ಕೊಡವ ಭಾಷೆಯ ವ್ಯಾಕರಣವನ್ನು ಬರೆಯಲಿಲ್ಲ. ಕೊಡವ ಭಾಷೆಯ ಓದಿಗೆ ಹಾಗೂ ಬೆಳವಣಿಗೆಗೆ ಈ ವ್ಯಾಕರಣ ಪುಸ್ತಕವು ತುಂಬಾ ಉಪಯುಕ್ತವಾದುದು. ಅಲ್ಲದೆ ಈ ಕೊಡವ ಭಾಷೆಯು ಆಡಳಿತ ಭಾಷೆಯೂ, ಸಂಪರ್ಕ ಮಾಧ್ಯಮ ಭಾಷೆಯೂ ಆದಲ್ಲಿ ೮ ನೇ ಪರಿಚ್ಛೇಧಕ್ಕೆ ಸೇರಲು ಸುಲಭವಾಗುತ್ತದೆ ಎಂದರು.


ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿತ ಚೀರಮ್ಮನ ವಾಣಿ ಚಂಗುಮ್ಮಯ್ಯನವರು ಬರೆದಿರುವ ’ಭಾವನೆಲ್ ಪಬ್ಬ್‌ನ ಬಳ್ಳಿ’, ಪಂದ್ಯಂಡ ರೇಣುಕಾ ಸೋಮಯ್ಯರವರು ಬರೆದಿರುವ ’ಪೊಂಬೊಳಿ’ ಹಾಗೂ ಡಾ.ವಿ.ಅವಿನಾಶ್‌ರವರ ಸಂಶೋಧನಾ ಪ್ರಬಂಧವಾಗಿರುವ ’ಕೊಡಗಿನಲ್ಲಿ ಸಾಂವಿಧಾನಿಕ ಸುಧಾರಣೆ ಮತ್ತು ರಾಜಕೀಯ ಪರಿವರ್ತನೆಗಳು (ಕ್ರಿ.ಶ.೧೯೨೪-೧೯೪೭)’ಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.


ವ್ಯಾಕರಣ ಸಮಿತಿಯ ಸದಸ್ಯರಾಗಿರುವ ನಾಗೇಶ್ ಕಾಲೂರುರವರು ವ್ಯಾಕರಣದ ಮಹತ್ವದ ಬಗ್ಗೆ ತಿಳಿಸಿದರು. ವಿರಾಜಪೇಟೆ ಪೂಮಾಲೆ ವಾರಪತ್ರಿಕೆಯ ಸಂಪಾದಕರಾಗಿರುವ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು "ಕೊಡವ ಪಾಜೆಲ್ ವ್ಯಾಕರಣತ್‌ರ ಮಹತ್ವ" ಎಂಬ ವಿಷಯದ ಬಗ್ಗೆ ವಿಚಾರಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ.ಸಿ.ಗಿರೀಶ್, ಅಕಾಡೆಮಿಯ ಸದಸ್ಯ ಕುಡಿಯರ ಮುತ್ತಪ್ಪ, ಎಂ.ಎ.ಕೊಡವ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಮೇಚೀರ ರವಿಶಂಕರ್ ನಾಣಯ್ಯ ಇತರರು ಇದ್ದರು.