ಹುಬ್ಬಳ್ಳಿ : ಸತತ ಮಳೆ ಹಾಗೂ ಗಾಳಿಯಿಂದಾಗಿ ಗುರುವಾರ ಮಧ್ಯರಾತ್ರಿ ಸುಮಾರು 12.55ಕ್ಕೆ ದೂಧಸಾಗರ ಮತ್ತು ಸೊನಾಲಿಯಮ್ ಮಧ್ಯೆ ಭೂಕುಸಿತ ಹಾಗೂ ಲೋಂಡಾ-ತಿನೈಘಾಟ್ ಮಧ್ಯೆ ರೈಲು ಮಾರ್ಗದಲ್ಲಿ ಗಿಡಗಳು ಬಿದ್ದಿದ್ದರಿಂದ ರೈಲು ಮಾರ್ಗದಲ್ಲಿ ವಿದ್ಯುತ್ ಸರಬರಾಜಿಗೆ ಸಮಸ್ಯೆ ಉಂಟಾಗಿ, ಕೆಲ ರೈಲುಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ಭೂಕುಸಿತ ಹಾಗೂ ಗಿಡಗಳು ಬಿದ್ದಿದ್ದರಿಂದ ರೈಲು ಮಾರ್ಗ ಅಕ್ಕಪಕ್ಕದ ವಿದ್ಯುತ್ ತಂತಿಗಳು ಹರಿದು, ಕೆಳಗೆ ಬಿದ್ದಿದ್ದವು.
ಇದರಿಂದಾಗಿ ಶುಕ್ರವಾರ ಬೆಳಗಿನಜಾವ 1 ಗಂಟೆಗೆ ವಾಸ್ಕೊ-ಯಶವಂತಪುರ ರೈಲನ್ನು ಸೊನಾಲಿಯಮ್ ನಿಲ್ದಾಣದಿಂದ ಮರಳಿ ಕುಲೆಮ್ ನಿಲ್ದಾಣಕ್ಕೆ ತರಲಾಯಿತು. ತಿರುಪತಿ- ವಾಸ್ಕೋ ಎಕ್ಸ್ಪ್ರೆಸ್ ರೈಲು ಲೋಂಡಾ ನಿಲ್ದಾಣದಿಂದ ತಡವಾಗಿ ಬೆಳಗಿನಜಾವ 1.40ಕ್ಕೆ ಹೊರಟಿತು. ಯಶವಂತಪುರ- ವಾಸ್ಕೊ ಎಕ್ಸ್ಪ್ರೆಸ್ ರೈಲು ತಡವಾಗಿ ಬೆಳಗಾವಿ ನಿಲ್ದಾಣದಿಂದ 1.35ಕ್ಕೆ ಹೊರಟಿತು. ವಾಸ್ಕೊ- ಜಾಸಿದ್ಧ ಎಕ್ಸ್ಪ್ರೆಸ್ ರೈಲು ವಾಸ್ಕೊ ನಿಲ್ದಾಣದಿಂದ ಬದಲಾದ ಸಮಯ ಬೆಳಗ್ಗೆ 7.50ಕ್ಕೆ ವಾಸ್ಕೊ ನಿಲ್ದಾಣದಿಂದ ಹೊರಟಿತು.
ಭೂಕುಸಿತ ಹಾಗೂ ಗಿಡಗಳು ಧರೆಗುರುಳಿದ ಘಟನಾ ಸ್ಥಳಕ್ಕೆ ನೈಋತ್ಯ ರೈಲ್ವೆಯ ಪರಿಹಾರ ತಂಡ ತೆರಳಿದ್ದು, ರೈಲು ಮಾರ್ಗವನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತಡವಾಗಿ ಸಂಚಾರ ಪ್ರಾರಂಭಿಸಿದ ರೈಲುಗಳಲ್ಲಿನ ಪ್ರಯಾಣಿಕರಿಗೆ ಉಪಹಾರ ಮತ್ತು ನೀರು ಒದಗಿಸುವ ಕಾರ್ಯವನ್ನು ಮಾಡಲಾಗಿದೆ. ಈ ಮಧ್ಯೆ ಪ್ರಯಾಣಿಕರ ಸಾಗಾಟಕ್ಕೆ ಸಾರಿಗೆ ಸಂಸ್ಥೆಯ ಬಸ್ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಹರ್ಷ ಖರೆ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸೌಲಭ್ಯಗಳನ್ನು ಪುನರ್ ಸ್ಥಾಪಿಸಲು ಅಗತ್ಯ ಮಾರ್ಗದರ್ಶನ ನೀಡಿದರು.
ದೂಧಸಾಗರ ಮತ್ತು ಸೊನಾಲಿಯಮ್ ಮಧ್ಯದ ಭೂಕುಸಿತದಿಂದ ಉಂಟಾಗಿದ್ದ ರೈಲು ಮಾರ್ಗದ ಸಮಸ್ಯೆಯನ್ನು ಶುಕ್ರವಾರ ಬೆಳಗ್ಗೆ 6 ಗಂಟೆ ಹೊತ್ತಿಗೆ ಸರಿಪಡಿಸಲಾಯಿತು. ಇದೇ ಸಮಯದಲ್ಲಿ ಲೋಂಡಾ-ತಿನೈಘಾಟ್ ಮಾರ್ಗ ಮಧ್ಯದಲ್ಲಿ ಬಿದ್ದಿದ್ದ ಗಿಡಗಳನ್ನು ಸಹ ತೆರವುಗೊಳಿಸಿದ್ದು, ರೈಲು ಸಂಚಾರ ಸುಗಮವಾಯಿತು.
ವಾಸ್ಕೊ- ಜಾಸಿದ್ಧ ಎಕ್ಸ್ಪ್ರೆಸ್ ರೈಲು ಲೋಂಡಾ ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ಹಾಗೂ ಯಶವಂತಪುರ- ವಾಸ್ಕೊ ಎಕಸ್ಪ್ರೆಸ್ ರೈಲು ಅಳ್ನಾವರ ನಿಲ್ದಾಣದಿಂದ ಬೆಳಗ್ಗೆ 6.05ಕ್ಕೆ ಹೊರಟಿತು.