ಆರ್.ಕೃಷ್ಣ ಮೈಸೂರು
ಸುತ್ತಮುತ್ತಲ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಜನರಲ್ಲಿ ಆತಂಕ ಉಂಟಾಗಿರುವ ಮಧ್ಯೆಯೇ ಚಾಮುಂಡಿ ಬೆಟ್ಟದಲ್ಲಿ ಕುಸಿದಿದ್ದ ಭಾಗವನ್ನು ದುರಸ್ತಿಗೊಳಿಸಲು ಇನ್ನೂ ಸಾಧ್ಯವಾಗಿಲ್ಲ.
ಕೇರಳದ ವಯನಾಡು, ಸಕಲೇಶಪುರ, ಶಿರೂರಿನಲ್ಲಿ ಭೂ ಕುಸಿತ ಕಣ್ಣ ಮುಂದೆಯೇ ಇರುವಂತೆಯೇ ಚಾಮುಂಡಿಬೆಟ್ಟದಲ್ಲಿಯೂ ಈ ಹಿಂದೆಯೇ ರಸ್ತೆ ಮೂರು ಭಾರಿ ಕುಸಿದಿತ್ತು.
2019ರ ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ನಂದಿ ಮಾರ್ಗದ ರಸ್ತೆ ಕುಸಿದಿತ್ತು. ಬಳಿಕ ರಸ್ತೆ ದುರಸ್ತಿ ಕಾರ್ಯ ಆರಂಭಿಸಿ 2020ಕ್ಕೆ ಪೂರ್ಣಗೊಳಿಸಲಾಗಿತ್ತು. ಮತ್ತೆ 2021ರ ಅಕ್ಟೋಬರ್‌ನಲ್ಲಿ ನಂದಿ ಮಾರ್ಗದ ರಸ್ತೆ ಭಾರಿ ಮಳೆಗೆ ಭೂ ಕುಸಿತವಾಗಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಆ ಮಾರ್ಗವನ್ನು ಸಂಚಾರಕ್ಕೆ ನಿರ್ಬಂಧಿಸಿ, ಕಾಮಗಾರಿ ಆರಂಭಿಸಲಾಗಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ.
ಮೂರು ವರ್ಷಗಳಿಂದ ರಸ್ತೆ ದುರಸ್ತಿ ಕಾಮಗಾರಿ ಕುಂಟುತ್ತ ಸಾಗಿದೆ. 2024ರ ದಸರೆಗಾದರೂ ನಂದಿ ಮಾರ್ಗ ಸಾರ್ವಜನಿಕರ ಬಳಕೆಗೆ ಸಿಗುವ ನಿರೀಕ್ಷೆ ಭಕ್ತರಿಗೆ ಇತ್ತು. ಆದರೆ ಆಷಾಢ ಮಾಸಕ್ಕೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದು ಭಕ್ತರಲ್ಲಿ ಬೇಸರ ತರಿಸಿದ್ದು, ದಸರಾ ವೇಳೆಗಾದರೂ ಕಾಮಗಾರಿ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ.
ಚಾಮುಂಡಿಬೆಟ್ಟಕ್ಕೆ ನಿತ್ಯವೂ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಿದ್ದು, ಚಾಮುಂಡೇಶ್ವರಿ ದರ್ಶನದ ಬಳಿಕ ನಂದಿಯನ್ನು ನೋಡಲು ಆಗಮಿಸುತ್ತಿದ್ದರು. ಆದರೆ ಈ ಮಾರ್ಗದಲ್ಲಿಯೇ ರಸ್ತೆ ಕುಸಿದಿರುವುದರಿಂದ ಸಂಚಾರವನ್ನು ನಿರ್ಬಂಧಿಸಲಾಗಿದೆ.
ರಸ್ತೆ ಕುಸಿತದಿಂದ ನಂದಿ ಮಾರ್ಗ ಸಂಪೂರ್ಣ ಬಂದ್ ಆಗಿರುವುದರಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ನಂದಿ ದರ್ಶನಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆಷಾಢ ಮಾಸದಲ್ಲಿ ದೇವಿಯ ದರ್ಶನದೊಂದಿಗೆ ನಂದಿ ದರ್ಶನ ಮಾಡುವುದು ವಾಡಿಕೆ. ಆದರೆ ರಸ್ತೆ ಮಾರ್ಗ ದುರಸ್ತಿ ಮಾಡುತ್ತಿರುವುದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ. ಪರಿಣಾಮ ಹಲವರು ನಂದಿ ದರ್ಶನ ಮಾಡದೇ ವಾಪಸ್ ತೆರಳುವಂತಾಗಿದೆ.
ಈ ಹಿಂದೆ ದೇವಿ ದರ್ಶನ ಬಳಿಕ ತಮ್ಮ ವಾಹನದಲ್ಲಿ ನಂದಿಯತ್ತ ತೆರಳುತ್ತಿದ್ದರು. ಆದರೀಗ, ಬೆಟ್ಟದ ಮೇಲಿಂದ ಸುಮಾರು 200 ಮೆಟ್ಟಿಲು ಇಳಿದು ನಂದಿ ದರ್ಶನ ಮಾಡಬೇಕು. ಇಲ್ಲವಾದರೆ, ಬೆಟ್ಟದ ಪಾದದ ಬಳಿಯಿಂದ 800 ಮೆಟ್ಟಿಲು ಏರಿ ದರ್ಶನ ಮಾಡುವ ಸ್ಥಿತಿ ಇದೆ.
ದಸರೆಗಾದರೂ ಪೂರ್ಣವಾಗುವುದೇ?
ನಾಡಹಬ್ಬ ಮೈಸೂರು ದಸರೆ ಹಾಗೂ ನವರಾತ್ರಿಯಲ್ಲಿ ಮೈಸೂರಿಗೆ ಲಕ್ಷಾಂತರ ಜನರು, ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಹೀಗೆ ಬಂದವರು ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆಯುತ್ತಾರೆ. ಈ ವೇಳೆಗಾದರೂ ನಂದಿ ಮಾರ್ಗದ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡು ಜನರ ಸಂಚಾರಕ್ಕೆ ಅನುವಾಗಲಿದೆಯೇ ಎಂದು ಕಾದು ನೋಡಬೇಕಿದೆ.
10 ಕೋಟಿ ರೂ. ಅನುದಾನ:
ಪ್ರಮುಖ ಧಾರ್ಮಿಕ ಕೇಂದ್ರವಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆಯನ್ನು ಶೀಘ್ರದಲ್ಲೇ ದುರಸ್ತಿ ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ಸರ್ಕಾರ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು.
2022ರ ಡಿಸೆಂಬರ್‌ನಿಂದ ಕಾಮಗಾರಿ ಶುರುವಾಗಿದ್ದು, 6 ಕೋಟಿ ರೂ. ಖರ್ಚಾಗಿದೆ. ಪ್ರಸ್ತುತ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕುಸಿತವಾಗಿದ್ದ ಜಾಗದಲ್ಲಿ 20 ಅಡಿ ಆಳದಿಂದ ಮಣ್ಣು ಹೊರ ಹಾಕಿ ಸಿಮೆಂಟ್ ಕಾಂಕ್ರೀಟ್ ತಡೆಗೋಡೆ (ರಿಟೇನಿಂಗ್ ವಾಲ್)ನಿರ್ಮಿಸಲಾಗುತ್ತಿದೆ. ಇದರಿಂದ ಕೊಂಚ ವಿಳಂಬವಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಅಧಿಕಾರಿಗಳು ಹೇಳುತ್ತಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಲಹೆಯಂತೆ ಕಾಮಗಾರಿ ನಡೆಯುತ್ತಿದೆ. ಸದ್ಯಕ್ಕೆ ಶೇ.90ರಷ್ಟು ಕಾಮಗಾರಿ ಮುಗಿದಿದೆ. ಆದರೆ ಗುತ್ತಿಗೆದಾರ ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ಬಾರಿಯ ದಸರಾ ವೇಳೆಗೆ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು.
ವಸಂತ್
ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ