ನರಗುಂದ: ಪಟ್ಟಣದ ಕಸಬಾ ಬಡಾವಣೆಯ ಮನೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಏಕಾಏಕಿ ಭೂಕುಸಿತವಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ 12 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಣ್ಣಿನ ವ್ಯಾಪಾರಿ ಫತ್ತೇಖಾನ್ ಅಲ್ಲಿಖಾನ್ ಪಠಾಣ ಅವರ ಮನೆ ಪಡಸಾಲೆಯಲ್ಲಿ ಭೂಕುಸಿತ ಉಂಟಾಗಿದೆ.
ಕುಟುಂಬ ಸದಸ್ಯರಾದ ಫತ್ತೇಖಾನ್ ಮತ್ತು ಅವರ ಪತ್ನಿ ಅಡುಗೆ ಮನೆಯಲ್ಲಿ, ಸಹೋದರ, ಸಹೋದರಿಯರು ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಮನೆಯ ಪಡಸಾಲೆಯಲ್ಲಿ ಮಲಗಿದ್ದ ಫಯಾಜ್, ಮಲ್ಲಿಕಜಾನ್, ಆಫ್ರೀನ್, ಅಯಾಜ್ ಖಾನ್, ಇರ್ಫಾನ್, ಇಮ್ರಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಮನೆಯಲ್ಲಿ ಇವರೆಲ್ಲರೂ ಸುಮಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಶುಕ್ರವಾರ ಎಂದಿನಂತೆ ಹಣ್ಣಿನ ವ್ಯಾಪಾರ ಮುಗಿಸಿ ರಾತ್ರಿ ಊಟ ಮಾಡಿ ಮಲಗಿದ್ದರು. ರಾತ್ರಿ 1ರ ಸುಮಾರಿಗೆ ಫಯಾಜ್ ಅವರು ಹಣ್ಣು ತರಲು ಬೆಳಗಾವಿಗೆ ತೆರಳಲು ಏಳುತ್ತಿದ್ದಂತೆಯೇ ಪಡಸಾಲೆಯಲ್ಲಿ ಏಕಾಏಕಿ ಭೂಕುಸಿತವಾಗಿದೆ. ಆಗ ಅವರು ಪಡಸಾಲೆಯಲ್ಲಿ ಮಲಗಿದ್ದವರನ್ನು ಎಬ್ಬಿಸಿಕೊಂಡು ಬಂದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
12 ಅಡಿ ಅಗಲ, 30 ಅಡಿ ಆಳದ ಗುಂಡಿ ಬಿದ್ದಿದೆ. ಪಡಸಾಲೆಗೆ ಹಾಕಿದ್ದ ಐದಾರು ಪರಸಿ ಕಲ್ಲುಗಳು ಬಿದ್ದಿವೆ. ಗುಂಡಿಯಲ್ಲಿ ಅಪಾರ ಪ್ರಮಾಣದ ಕಲುಷಿತ ನೀರು ಸಂಗ್ರಹವಾಗುತ್ತಿದ್ದು, ಅದನ್ನು ಪಂಪ್ಸೆಟ್ ಮೂಲಕ ಹೊರಹಾಕಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಮನೆ ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.
ಈ ಕುರಿತು ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಭೂ ಕುಸಿತದಿಂದಾದ ಗುಂಡಿ ಮುಚ್ಚಲು ಮುಂದಾಗುತ್ತಿಲ್ಲ. ಪುರಸಭೆಯ ಕೆಲ ಸಿಬ್ಬಂದಿ ಗುಂಡಿ ಮುಚ್ಚಲು ಹಣ ಕೇಳುತ್ತಿದ್ದಾರೆ ಎಂದು ಫಯಾಜ್ ಪಠಾಣ ಆರೋಪಿಸಿದರು. ಈ ಕುರಿತ ಪ್ರತಿಕ್ರಿಯೆಗೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್ ನಂಬರ್ ಸಂಪರ್ಕಕ್ಕೆ ಸಿಗಲಿಲ್ಲ.