ವಿಜಯಪುರ ನಗರದ ವಾರ್ಡ್ ನಂ.33 ರಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಶಂಕರ ಹೂಗಾರ ಮತ್ತಿತರರಿದ್ದಾರೆ.  
ಜಿಲ್ಲೆ

ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ, ಅಧಿಕಾರ ಶಾಶ್ವತವಲ್ಲ; ಅಭಿವೃದ್ಧಿ ಶಾಶ್ವತ ಎಂದ ಶಾಸಕ ಯತ್ನಾಳ

ವಿಜಯಪುರ: ಅಧಿಕಾರ ಶಾಶ್ವತವಲ್ಲ. ನಾವು ಮಾಡಿರುವ ಕೆಲಸ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಹೀಗಾಗಿ ವಿಜಯಪುರ ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಿ, ಜನರ ವಿಶ್ವಾಸ ಉಳಿಸಿಕೊಂಡಿರುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಹೇಳಿದರು.

ನಗರದ ವಾರ್ಡ್ ನಂ.33 ರ ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರದವರೆಗೆ ಮತ್ತು ಮದೀನಾ ನಗರದಿಂದ ಸಾಯಿ ನಗರದವರೆಗೆ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವುದು ಹಾಗೂ ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರ ಮೂಲಕ ಸಾಯಿ ನಗರ ವರೆಗೆ ರೂ.1.5 ಕೋಟಿ ಅನುದಾನದಲ್ಲಿ ಆಂತರಿಕ ಒಳಚರಂಡಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

2018ರ ಚುನಾವಣೆಯಲ್ಲಿ ನನ್ನ ಮೇಲೆ ಬಹುದೊಡ್ಡ ಸವಾಲು ಇತ್ತು. ನಗರದಲ್ಲಿ ಎಲ್ಲಿ ಹುಡುಕಿದರೂ ಒಂದು ಒಳ್ಳೆಯ ರಸ್ತೆ ಇರಲಿಲ್ಲ, ಚರಂಡಿ ವ್ಯವಸ್ಥೆಯೂ ಇರಲಿಲ್ಲ. ಎಲ್ಲಿ ನೋಡಿದರಲ್ಲಿ ಧೂಳು. ನಗರ ಜನತೆಯ ಆಶೀರ್ವಾದದಿಂದ ಗೆದ್ದು, ಧೂಳಾಪುರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಿ, ಜನರು ನನ್ನ ಮೇಲೆ ಇಟ್ಟ ವಿಶ್ವಾಸ ಉಳಿಸಿಕೊಂಡಿದ್ದಲ್ಲದೆ, ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಇರುವ ನಗರದ ಪಟ್ಟಿಯಲ್ಲಿ ವಿಜಯಪುರ ನಗರ 3ನೇ ಸ್ಥಾನಕ್ಕೆ ತಂದಿರುವ ಹೆಮ್ಮೆಯಿದೆ. ಇದುವೆ ನಾನು ಮಾಡಿರುವ ಅಭಿವೃದ್ಧಿಗೆ ಸಾಕ್ಷಿ ಎಂದರು.

ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಾಗಗಳನ್ನು ಉದ್ಯಾನ, ಓಪನ್ ಜಿಮ್, ಯೋಗಾ ಕೇಂದ್ರ ಮತ್ತಿತರೆ ಸಾರ್ವಜನಿಕ ಉದ್ದೇಶಕ್ಕಾಗಿಯೇ ಬಳಸಬೇಕು. ಸ್ವತ ನಾನು ಉಪಯೋಗಿಸಲು ಬಂದರೂ ನನ್ನನ್ನು ಕೇಳಬೇಡಿ. ಯಾರಾದರೂ ಸಾರ್ವಜನಿಕ ಉದ್ದೇಶದ ಜಾಗ ಕಬಳಿಸಲು ಯತ್ನಿಸಿದರೆ ತಕ್ಷಣ ತಿಳಿಸಿ, ಸರಿಯಾಗಿ ಕ್ರಮ ಕೈಗೊಳ್ಳೋಣ ಎಂದರು.

ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ವಿಠಲ ನಡುವಿನಕೇರಿ, ಆನಂದ ಹಂಜಿ ಮತ್ತಿತರರಿದ್ದರು.