ಜಿಲ್ಲೆ

ಕದ್ರಾ ಅಣೆಕಟ್ಟೆಯ ಹಿನ್ನೀರು ಪ್ರದೇಶದಲ್ಲಿ ಗುಡ್ಡ ಕುಸಿತ

Uttara Kannada - Subash Hegde

ಕಾರವಾರ: ಭಾರಿ ಮಳೆಯ ಪರಿಣಾಮ ತಾಲೂಕಿನ ಕದ್ರಾ-ಕೊಡಸಳ್ಳಿ ರಸ್ತೆಯ ನಡುವೆ ಬುಧವಾರ ರಾತ್ರಿ ಗುಡ್ಡ ಕುಸಿತ ಉಂಟಾಗಿದೆ. ಇದರಿಂದ ಕೊಡಸಳ್ಳಿ ಅಣೆಕಟ್ಟೆಯಲ್ಲಿ ಕರ್ತವ್ಯದಲ್ಲಿರುವ ಕೆಪಿಸಿ ನೌಕರರ ಓಡಾಟಕ್ಕೆ ಅಡಚಣೆಯಾಗಿದೆ. ಅಲ್ಲದೇ, ಎರಡು ಗ್ರಾಮಗಳು ತಾಲೂಕು ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿವೆ.

ಕದ್ರಾದಿಂದ 12 ಕಿಮೀ ದೂರದಲ್ಲಿ ಸುಮಾರು ನಾಲ್ಕೈದು ಎಕರೆಗೂ ಹೆಚ್ಚು ವ್ಯಾಪ್ತಿಯ ಮರಗಳೇ ತುಂಬಿದ ಗುಡ್ಡ ಜರಿದು 50 ಲೋಡ್‌ಗೂ ಅಽಕ ಮಣ್ಣು ರಸ್ತೆಯಲ್ಲಿ ತುಂಬಿಕೊಂಡಿದೆ. ಆ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಗುಡ್ಡ ತೆರವು ಮಾಡುವ ಕಾರ್ಯಕ್ಕೆ ತೊಡಕುಂಟುಮಾಡಿದೆ.

ಸಿಕ್ಕಿ ಹಾಕಿಕೊಂಡ ಬಸ್

ಕುಸಿತಗೊಂಡ ಗುಡ್ಡದ ಆಚೆಗೆ ಐದಾರು ಕಿಮೀ ದೂರದಲ್ಲಿ ಬಾಳೆಮನೆ ಹಾಗೂ 18 ಕಿಮೀ ದೂರದಲ್ಲಿ ಸುಳಗೇರಿ ಎಂಬ ಗ್ರಾಮಗಳಿವೆ. ಸುಮಾರು 35 ಮನೆಗಳಿವೆ. ಆ ಎಲ್ಲ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ತೊಂದರೆ ಉಂಟಾಗಿದೆ. ರಾತ್ರಿ ಪಾಳಿಯಲ್ಲಿ ತೆರಳಿದ್ದ ಸುಳಗೇರಿ ಎನ್‌ಡಬ್ಲುಕೆಆರ್‌ಟಿಸಿ ಬಸ್ ಗ್ರಾಮದಲ್ಲೇ ಸಿಕ್ಕಿಹಾಕಿಕೊಂಡಿದೆ. ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ.

ಕೊಡಸಳ್ಳಿ ಅಣೆಕಟ್ಟೆ ಹಾಗೂ ವಿದ್ಯುದಾಗಾರದಲ್ಲಿ ಒಂದು ಶಿಫ್ಟ್ನಲ್ಲಿ ಸುಮಾರು 100 ಜನ ಕಾರ್ಯ ನಿರ್ವಹಿಸುತ್ತಾರೆ. ಅವರ ಕ್ವಾಟ್ರಸ್‌ಗಳು 35 ಕಿಮೀ ದೂರದ ಕದ್ರಾದಲ್ಲಿವೆ. ರಾತ್ರಿ ಪಾಳಿಗೆ ತೆರಳಿದ್ದ ಕೆಪಿಸಿ ನೌಕರರು ಕೊಡಸಳ್ಳಿಯಲ್ಲೇ ಲಾಕ್ ಆಗಿದ್ದಾರೆ. ಅವರಿಗೆ ಕದ್ರಾದಿಂದ ಬಸ್ ಮಾಡಿದ್ದು, ಕುಸಿದ ಗುಡ್ಡ ದಾಟಲು ಕಾಲು ಹಾದಿ ಮಾಡಿಕೊಡಲಾಗಿದೆ. ಅತ್ತ ಕಡೆಯಿಂದ ಜೀಪ್ ಕಳಿಸಿ ನೌಕರರನ್ನು ಸಾಗಿಸಲಾಗುತ್ತಿದೆ.

ಹಿಂದೆಯೂ ಆಗಿತ್ತು:

2022 ರ ಮಹಾ ಮಳೆಗೆ ಕೊಡಸಳ್ಳಿ ಅಣೆಕಟ್ಟೆಯ ಬಳಿ ಭಾರಿ ಗುಡ್ಡ ಕುಸಿತ ಸಂಭವಿಸಿತ್ತು. ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಕದ್ರಾ ಅಣೆಕಟ್ಟೆಯ ಹಿನ್ನೀರು ಇರುವ ಪ್ರದೇಶ ಇದಾಗಿದ್ದು, ಅಕ್ಕಪಕ್ಕದ ಪ್ರದೇಶಗಳಲ್ಲಿ ನಿರಂತರ ಕುಸಿತ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸದ್ಯಕ್ಕೆ ತೆರವಿಲ್ಲ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮಣ್ಣು ತೆರವು ಮಾಡಿದರೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ ಹಾಗಾಗಿ ಸದ್ಯದಲ್ಲಿ ಮಣ್ಣು ತೆರವು ಮಾಡುವುದಿಲ್ಲ ಎಂದು ತಹಸೀಲ್ದಾರ್ ನಿಶ್ಚಲ ನರೋನಾ ವಿಜಯವಾಣಿಗೆ ತಿಳಿಸಿದ್ದಾರೆ. ಮಳೆ ಸ್ವಲ್ಪ ಕಡಿಮೆ ಆದ ತಕ್ಷಣ ಡ್ರೋನ್ ಸರ್ವೇ ನಡೆಸಿ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೊಡಸಳ್ಳಿ ಕದ್ರಾ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಽಸಿ ಜಿಲ್ಲಾಽಕಾರಿ ಕೆ.ಲಕ್ಷಿ÷್ಮÃಪ್ರಿಯಾ ಆದೇಶ ಹೊರಡಿಸಿದ್ದಾರೆ.