ಜಿಲ್ಲೆ

ಗುಡ್ಡ ಕುಸಿತ, ಹೆಚ್ಚಿದ ಆತಂಕ

Uttara Kannada - Subash Hegde

ಕಾರವಾರ: ಭಾರಿ ಮಳೆಯಿಂದ ತಾಲೂಕಿನ ವಿವಿಧೆಡೆ ಗುಡ್ಡ ಕುಸಿತ ಉಂಟಾಗಿದ್ದು, ಗುಡ್ಡದ ಬುಡದ ನಾಗರಿಕರು ಆತಂಕದಲ್ಲಿದ್ದಾರೆ.

ಕಡವಾಡದ ಮಂದ್ರಾಳಿ ಸಮೀಪ ದರೆ ಕುಸಿದ ಪರಿಣಾಮ ಕಾರವಾರ-ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ಸೋಮವಾರ ಬೆಳಗ್ಗೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿತ್ತು‌. ಸಾಯಂಕಾಲದ ಹೊತ್ತಿಗೆ ಅದನ್ನು ತೆರವು ಮಾಡಲಾಯಿತು. ಆದರೆ, ಸಾಯಂಕಾಲ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು, ರಸ್ತೆ ಸಂಪೂರ್ಣ ಬಂದ್ ಆಯಿತು. ರಸ್ತೆಯ ಕೆಳಗಿರುವ ಮೂರು ಮನೆಗಳಿಗೆ ಅಲ್ಪ ಹಾನಿಯಾಗಿದೆ. ಮನೆಯವರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.‌ ಮಣ್ಣ ಮತ್ತೂ ಕುಸಿಯುವ ಆತಂಕದಲ್ಲಿದ್ದಾರೆ. ಜು.17 ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.

ಕಾರವಾರ ಹಬ್ಬುವಾಡ ಗುತ್ತಿಂಬೀರ ಕಾಲನಿಯ ವಿನೋದ ಉಳ್ವೇಕರ್ ಅವರ ಮನೆಯ ಮೇಲೆ ಬಂಡೆಗಳು ಉರುಳಿ ಬಿದ್ದಿವೆ. ಬೆಳಗಿನಜಾವ 5 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಅಡುಗೆ ಮನೆಯ ಗೋಡೆ ಒಡೆದು ಕಲ್ಲು ಒಳ ನುಗ್ಗಿದೆ.