ಜಿಲ್ಲೆ

ಜಿಲ್ಲೆಯಲ್ಲಿ ಭೂಕುಸಿತಕ್ಕೆ ಬೇಕಿದೆ ಶಾಶ್ವತ ಪರಿಹಾರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಳೆಗಾಲದ ಸಂದರ್ಭದಲ್ಲಿ ಕೊಡಗಿನಲ್ಲಿ ಅಲ್ಲಲ್ಲಿ ಸಾಮಾನ್ಯ ಎಂಬAತೆ ಆಗಿದ್ದ ಭೂಕುಸಿತದ ಭೀಕರ ಪರಿಣಾಮಗಳು ಜಿಲ್ಲೆಯಲ್ಲಿ ಕಂಡು ಬಂದಿದ್ದು 2018ರಲ್ಲಿ. ಅಲ್ಲಿಯ ತನಕ ತೋಟಗಳಲ್ಲಿ, ರಸ್ತೆ ಬದಿಗಳಲ್ಲಿ ಚಿಕ್ಕ ಪುಟ್ಟ ಭೂಕುಸಿತಗಳು ಆಗಾಗ್ಗೆ ಸಂಭವಿಸುತ್ತಿದ್ದವು. ಅಂಥ ದೊಡ್ಡ ಪ್ರಮಾಣದ ಯಾವುದೇ ಹಾನಿ ಆಗುತ್ತಿರಲಿಲ್ಲ. ಆದರೆ 2018ರಲ್ಲಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿದ ಸಂದರ್ಭ ಅನೇಕ ಭಾಗಗಳಲ್ಲಿ ದೊಡ್ಡ ದೊಡ್ಡ ಬೆಟ್ಟಗಳೇ ಕುಸಿದು ಬಂದಿದ್ದವು. 2019 ಮತ್ತು 2020ರಲ್ಲೂ ಇಂಥ ದೊಡ್ಡ ಮಟ್ಟದ ದುರಂತಗಳು ಮರುಕಳಿಸಿ ಜಿಲ್ಲೆಯ ಜನತೆಯನ್ನು ಕಾಡಿದ್ದವು.

ನಂತರದ ವರ್ಷಗಳಲ್ಲಿ ಈ ಪ್ರಮಾಣದಲ್ಲಿ ದೊಡ್ಡ ಮಟ್ಟದ ಭೂಕುಸಿತ ಪ್ರಕರಣಗಳು ಸಂಭವಿಸಿಲ್ಲ. ಆದರೆ ಪ್ರತಿ ಮಳೆಗಾಲದಲ್ಲೂ ಅಲ್ಲಲ್ಲಿ ಚಿಕ್ಕ ಪುಟ್ಟ ಭೂಕುಸಿತಗಳ ವರದಿ ಆಗುತ್ತಲೇ ಇರುತ್ತದೆ. ಇದರಿಂದ ಮನೆ, ತೋಟಗಳಿಗೆ ಹಾನಿ, ಜನ-ಜಾನುವಾರುಗಳ ಪ್ರಾಣ ಹಾನಿಯೂ ಸಂಭವಿಸುತ್ತಲೇ ಇರುತ್ತದೆ. ಹಾಗಾಗಿ ಇಂಥ ದುರ್ಘಟನೆಗಳು ಮರುಕಳಿಸದಂತೆ ತಡೆಯಲು ಶಾಶ್ವತ ಯೋಜನೆಯ ಅಗತ್ಯತೆ ಬಗ್ಗೆ ಜಿಲ್ಲೆಯಲ್ಲಿ 2018ರಿಂದಲೇ ಬೇಡಿಕೆ ಕೇಳಿ ಬರುತ್ತಿದೆ. ಈಗ ಹಾಲಿ ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಕೂಡ ಈ ನಿಟ್ಟಿನಲ್ಲಿ ಸರ್ಕಾರದ ಮುಂದೆ ಅಹವಾಲು ಇಡುತ್ತಲೇ ಬಂದಿದ್ದಾರೆ.

ಶುಕ್ರವಾರ (ಜು.25) ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಇಲ್ಲಿಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಹತ್ವದ ಘೋಷಣೆಯೊಂದನ್ನು ಮಾಡಿದರು. ಕಳೆದ ಐದಾರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ಯೋಜನೆ ರೂಪಿಸಲು 50 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸೂಚಿಸಲಾಗಿದೆ ಎಂದರಲ್ಲದೆ ಸಂಭಾವ್ಯ ಭುಕುಸಿತ ಪ್ರದೇಶಗಳಲ್ಲಿ ರಕ್ಷಣಾ ಕಾಮಗಾರಿ ಕೂಡಲೇ ಆರಂಭಿಸಲಾಗುವುದು ಎನ್ನುವ ಮಾಹಿತಿ ನೀಡಿದ್ದರು.

ಕಂದಾಯ ಸಚಿವರ ಪ್ರಕಟಣೆ ಜಿಲ್ಲೆಯಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಕೊಡಗಿನ ಪಾಲಿಗೆ ಅತ್ಯಗತ್ಯವಾಗಿದ್ದ ಈ ಯೋಜನೆ ಆದಷ್ಟು ಶೀಘ್ರ ಆರಂಭ ಆಗಲಿ ಎನ್ನುವ ಆಶಯ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೂ ಮೊದಲು ವೈಜ್ಞಾನಿಕ ಅಧ್ಯಯನದ ಅಗತ್ಯತೆಯ ಮಾತುಗಳೂ ಕೇಳಿಬರುತ್ತಿದೆ. ಮಡಿಕೇರಿಯ ಜಿಲ್ಲಾಡಳಿತ ಭವನ ತಡೆಗೋಡೆ ಕಾಮಗಾರಿಯ ಉದಾಹರಣೆ ಎದುರಿಗೆ ಇರುವಾಗ ಮುಂದೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆಯೂ ಕಾಳಜಿ ವ್ಯಕ್ತ ಆಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಿರಂತರ ಭೂಕುಸಿತ ತಡೆಗಟ್ಟಲು 50 ಕೋಟಿ ರೂ. ನೀಡುತ್ತಿರುವುದು ಯಾವ ರೀತಿ ಬಳಕೆ ಆಗುತ್ತದೆ ಎಂಬುದು ಅತಿ ಮುಖ್ಯ. ಮಡಿಕೇರಿಯ ಡಿಸಿ ಕಚೇರಿಯ ತಡೆಗೋಡೆ ನಿರ್ಮಾಣದಂತೆ ಅವೈಜ್ಞಾನಿಕವಾಗಿ ತಡೆಗೋಡೆಗಳನ್ನು ನಿರ್ಮಿಸಿ ಸರ್ಕಾರದ ಹಣವನ್ನು ವ್ಯರ್ಥ ಮಾಡುವ ಬದಲು ಸಮರ್ಪಕವಾಗಿ ಅಧ್ಯಯನ ನಡೆಸಿ ಅವಶ್ಯಕತೆ ಇರುವ ಕಡೆ ಪೂರ್ಣ ಪ್ರಮಾಣದಲ್ಲಿ ಬಳಕೆ ಆದರೆ ಒಳಿತು.

ಸಿ.ಆರ್. ದೇಶಿಕ್ ಗಣಪತಿ, ಕೊಟ್ಟೋಳಿ, ವಿರಾಜಪೇಟೆ

ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಇದಕ್ಕೆ ಒಂದು ರೀತಿಯಲ್ಲಿ ಹವಾಮಾನ ವೈಪರಿತ್ಯವೇ ಕಾರಣವಾದರೂ ಜನಸಾಮಾನ್ಯರು ವಾಣಿಜ್ಯೋದ್ಯಮಕ್ಕಾಗಿ ಭೂಮಿಯನ್ನು ಬೇರೆ ರೀತಿಯಲ್ಲಿ ಘಾಸಿಗೊಳಿಸುತ್ತಿರುವುದು ಕಾರಣವಾಗಿದೆ. ಅದರಂತೆಯೇ ಕೃಷಿ ಭೂಮಿಯನ್ನು ತೋಟಗಾರಿಕೆಗೆ ಬಳಸಿಕೊಂಡು ನೀರಾವರಿ ಭೂಮಿಯನ್ನು ಒಣ ಭೂಮಿಯನ್ನಾಗಿಸುತ್ತಿರುವುದು ಕೂಡ ಒಂದು ರೀತಿಯಲ್ಲಿ ಮಳೆಗಾಲದಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ ಎನ್ನಬಹುದು. ಅನುದಾನದಿಂದ ಭೂಕುಸಿತ ತಡೆಗಟ್ಟುವ ಬದಲು ಭೂಕುಸಿತದಿಂದ ಸಾರ್ವಜನಿಕ ಆಸ್ತಿ ಹಾನಿಯಾಗಿರುವ ಕಡೆ ದುರಸ್ತಿ ಮಾಡಬಹುದು.

ಬೈಚನ ಸ್ವಾತಿ ಮಂದಪ್ಪ, ಕಾರುಗುಂದ ಗ್ರಾಮ

ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ಸಾಕಷ್ಟು ಮಳೆ ಹೆಚ್ಚಾಗುತ್ತಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹಲವಷ್ಟು ಕಡೆ ತಡೆಗೋಡೆ ಕಾಮಗಾರಿಗಳಿಗೆ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಾ ಬರಲಾಗುತ್ತಿದ್ದರೂ ಅದನ್ನು ಜಿಲ್ಲಾಡಳಿತ ಗಮನಿಸುತ್ತಿಲ್ಲ. ಕೆಲವು ಬಡಾವಣೆಗಳ ನಿವಾಸಿಗಳು ಅಪಾಯದ ಭೀತಿಯಲ್ಲಿ ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ಬಿಡುಗಡೆಯಾಗುವ ಅನುದಾನದಲ್ಲಿ ಕಾಮಗಾರಿ ನಡೆಸುವ ಸಂದರ್ಭ ಹಿಂದಿನ ಬೇಡಿಕೆ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಆದ್ಯತೆ ಮೇರೆಗೆ ಕಾರ್ಯನಿರ್ವಹಿಸಬೇಕು,

ಕೆ.ಕೆ. ಪ್ರಸಾದ್ ಕುಟ್ಟಪ್ಪ, ಸುಂಟಿಕೊಪ್ಪ

ಕೊಡಗಿನಲ್ಲಿ ನಿರಂತರ ಭೂ ಕುಸಿತಕ್ಕೆ ಕಾರಣ ಮೊದಲು ಹುಡುಕಬೇಕಿದೆ. ಅಕ್ರಮ ರೆಸಾರ್ಟ್ ಹಾಗೂ ಇನ್ನಿತರ ಕಾಮಗಾರಿಗಳು ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕಾಗಿ ಭೂ ಕೊರೆದು ಅವರಿಗೆ ಬೇಕಾದ ರೀತಿಯಲ್ಲಿ ಭೂ ಗರ್ಭವನ್ನು ಅಗೆಯುತ್ತಿದ್ದಾರೆ. ಇದರಿಂದ ಪ್ರತಿ ಮಳೆಗಾಲದಲ್ಲಿ ನಿರಂತರವಾಗಿ ಭೂ ಕುಸಿತವಾಗುತ್ತಿದೆ. ಸಚಿವರು ಅನುದಾನ ಬಿಡುಗಡೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಅನುದಾನದ ಸದುಪಯೋಗ ಆಗಲಿ.

ಕವಿತಾ, ಶಿಕ್ಷಕಿ, ಗೋಪಾಲಪುರ

ಕೊಡಗಿನಲ್ಲಿ ಭೂ ಕುಸಿತ ತಡೆಗಟ್ಟುವ ಯೋಜನೆ ರೂಪಿಸಲು ಅನುದಾನ ಬಿಡುಗಡೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೀಡಿರುವ ಕೆಲಸಕ್ಕೆ ಆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಕೆಲಸ ಮಾಡಬೇಕು. ಭ್ರಷ್ಟ್ಟಾಚಾರ ಮಾಡದೇ ಕಾರ್ಯ ನಿರ್ವಹಿಸಿದಲ್ಲಿ ಅನುದಾನದ ಬಳಕೆಯಿಂದ ಪ್ರಯೋಜನವಾಗುತ್ತದೆ. ಇಲ್ಲವಾದರೆ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಆ ರೀತಿ ಆಗದಿರಲಿ.

ಪುಷ್ಪ ಸಂತೋಷ್, ನೀರ್ದೇಶಕಿ, ಕೃಷಿ ಪತ್ತಿನ ಸಹಕಾರ ಸಂಘ, ಕೊಡ್ಲಿಪೇಟೆ

ಮೊದಲು ಭೂಕುಸಿತ ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಟ್ಟ ಗುಡ್ಡಗಳನ್ನು ಅಗೆಯುವುದಕ್ಕೆ ನಿಷೇಧ ಹೇರಬೇಕು. ಈ ಹಿಂದೆ ಭೂಕುಸಿತದಿಂದ ಅಸ್ತಿ ಮನೆ ಕಳೆದುಕೊಂಡ ಬಡವರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ನಿಜವಾದ ಸಂತ್ರಸ್ತರಿಗೆ ಸರ್ಕಾರಿ ಹುದ್ದೆ ನೀಡಬೇಕು. ಬಿಡುಗಡೆಯಾಗುವ ಹಣ ಪೋಲಾಗುವುದು ಬೇಡ.

ನ. ಲ. ವಿಜಯ, ಸಾಹಿತಿ, ಸೋಮವಾರಪೇಟೆ

ಮಳೆಗಾಲದಲ್ಲಿ ಭೂಕುಸಿತ ಜಿಲ್ಲೆಯಲ್ಲಿ ಸಾಮಾನ್ಯ ಆಗಿಬಿಟ್ಟಿದೆ. ಇದಕ್ಕೆ ಸಾಕಷ್ಟು ಕಾರಣಗಳು ಇರಬಹುದು. ಈ ಬಗ್ಗೆ ಮೊದಲು ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು. ಭೂಮಿ ಕುಸಿಯಲು ಕಾರಣವಾಗಿರುವ ಅಂಶಗಳನ್ನು ಗುರುತಿಸಬೇಕು. ನಂತರ ಭೂ ಕುಸಿತ ತಡೆಗಟ್ಟಲು ಯೋಜನೆ ರೂಪಿಸಿ ಸರ್ಕಾರ ಬಿಡುಗಡೆ ಮಾಡುವ ಅನುದಾನ ಬಳಸಿದಲ್ಲಿ ಸದುಪಯೋಗ ಆಗಲಿದೆ. ಈ ಬಗ್ಗೆ ಸೂಕ್ತ ಮೇಲ್ವೀಚಾರಣೆಯೂ ಅಗತ್ಯ.

ಲಕ್ಷö್ಮಣ, ಭಾಗಮಂಡಲ ನಿವಾಸಿ

ಆಗಾಗ್ಗೆ ಭೂಕುಸಿತ ಸಂಭವಿಸುವ ಮೂಲಕ ಕೊಡಗಿನಲ್ಲಿ ಸಮಸ್ಯೆಗಳ ಪುನರಾವರ್ತನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಭೂಕುಸಿತ ತಡೆಗೆ ರಾಜ್ಯ ಸರ್ಕಾರ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಪ್ರಕಟಿಸಿರುವುದು ಸ್ವಾಗತಾರ್ಹ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯ ಕಾಮಗಾರಿ ಉದಾಹರಣೆ ನಮ್ಮೆದುರು ಇರುವಾಗ ಮುಂದೆ ನಡೆಯುವ ಕೆಲಸಗಳ ಬಗ್ಗೆ ಎಚ್ಚರಿಕೆ ಅಗತ್ಯ. ಜಿಲ್ಲೆಯ ಪ್ರಾಕೃತಿಕ ಸ್ಥಿತಿಗತಿಗೆ ಅನುಗುಣವಾಗಿ ಯೋಜನೆಗಳು ಸಿದ್ಧಗೊಂಡು ಕೆಲಸಗಳು ನಡೆಯುವಂತಾಗಲಿ.

ಬಿ. ನಟರಾಜು, ಕುಶಾಲನಗರ ನಿವಾಸಿ

ಕಳೆದ ಐದಾರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯ ಇಬ್ಬರು ಶಾಸಕರು ವಿಶೇಷ ಅನುದಾನಕ್ಕೆ ಕೋರಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಭೂಕುಸಿತ ತಡೆಯಲು ಯೋಜನೆ ರೂಪಿಸುವ ಸಲುವಾಗಿ 50 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸೂಚಿಸಲಾಗಿದೆ. ಬಳಿಕ ಸಂಭಾವ್ಯ ಭುಕುಸಿತ ಪ್ರದೇಶಗಳಲ್ಲಿ ರಕ್ಷಣಾ ಕಾಮಗಾರಿ ಆರಂಭಿಸಲಾಗುವುದು.

ಕೃಷ್ಣ ಬೈರೇಗೌಡ, ಕಂದಾಯ ಸಚಿವ