ಜಿಲ್ಲೆ

ವಿಮಾನ ನಿಲ್ದಾಣಕ್ಕೆ ಭೂಮಿ ಹುಡುಕಾಟ

ಗಂಗಾಧರ ಬಿ ವಿ

ರಾಮನಗರದಲ್ಲೂ ಸಾಧ್ಯತೆ ಸ್ಥಳದ ಸ್ಪಷ್ಟತೆ ಇಲ್ಲ

 ರಾಮನಗರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಬೆಂಗಳೂರು ಸುತ್ತ ಮುತ್ತ ಜಾಗ ಹುಡುಕಾಟಕ್ಕೆ ಸೂಚನೆ ನೀಡಿದೆ.

ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವನ್ನು ತಮಿಳುನಾಡು ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ ಎಚ್ಚತ್ತಿರುವ ರಾಜ್ಯ ಸರ್ಕಾರ ಇಂತಹ ಒಂದು ಕ್ರಮಕ್ಕೆ ಮುಂದಾಗಿದ್ದು, ಎಲ್ಲಿ ಹೊಸ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಾಳಿ ಸುದ್ದಿಗಳೂ ಎದ್ದಿವೆ.

ಇತ್ತೀಚೆಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿರುವ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು, ಬೆಂಗಳೂರು ಹೊರವಲಯದಲ್ಲಿ ನಿಲ್ದಾಣಕ್ಕೆ ಭೂಮಿ ಲಭ್ಯತೆಯನ್ನು ಪರಿಶೀಲಿಸಿ, ಕಾರ್ಯಸಾಧ್ಯತಾ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ರಾಮನಗರ ಸೇರಿ ಬೆಂಗಳೂರಿಗೆ ಹೊಂದಿಕೊಂಡಿರುವ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಂಬಂಧ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಸಾಲುತ್ತಿಲ್ಲ ಜಾಗ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಸಾಕಷ್ಟು ಹೆಸರು ಮಾಡಿದೆ. 2008ರಲ್ಲಿ ಆರಂಭಗೊಂಡ ಈ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಪ್ರತಿವರ್ಷ ಶೇ.10 ಹೆಚ್ಚಳವಾಗುತ್ತಿದೆ. 4,700 ಎಕರೆಯಲ್ಲಿರುವ ನಿಲ್ದಾಣದಲ್ಲಿ ಸದ್ಯ 2 ಟರ್ಮಿನಲ್‌ಗಳಿದ್ದು, ಪ್ರಯಾಣಿಕರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ನಿರ್ವಹಣೆ ಇಲ್ಲಿ ಸವಾಲಿನ ಕೆಲಸವಾಗಲಿದೆ. ಹಾಗಾಗಿ, ಪರ್ಯಾಯವಾಗಿ ಮತ್ತೊಂದು ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕೆಂಪೇಗೌಡ ನಿಲ್ದಾಣವು ರಾಜಧಾನಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ. ಹೊಸ ನಿಲ್ದಾಣವನ್ನು ಬೆಂಗಳೂರಿಗೆ ಸಮೀಪದಲ್ಲಿರುವಂತೆ ನಿರ್ಮಿಸುವ ಆಲೋಚನೆ ಇದೆ. ಅದಕ್ಕಾಗಿ, ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸೇರಿದಂತೆ ರಾಜಧಾನಿಯನ್ನು ತ್ವರಿತವಾಗಿ ತಲುಪಬಲ್ಲ ಸಂಪರ್ಕ ವ್ಯವಸ್ಥೆ ಇರುವ ಸ್ಥಳಗಳನ್ನು ಹುಡುಕಲಾಗುತ್ತಿದೆ. ಭೂಮಿ ಲಭ್ಯತೆಯನ್ನು ಪರಿಶೀಲಿಸಿ, ನಿಲ್ದಾಣದ ಕಾರ್ಯಸಾಧ್ಯತೆಯ ವರದಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸದ್ಯ ಬೆಂಗಳೂರಿಗೆ ಹೊಂದಿಕೊಂಡಂತೆ ರಾಮನಗರ, ತುಮಕೂರು, ಮಂಡ್ಯ ಜಿಲ್ಲೆಯ ನಾಗಮಂಗಲಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆಯಾಗಿವೆ ಎನ್ನುವ ಚರ್ಚೆಗಳು ನಡೆದಿವೆ. ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗಳು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿವೆ. ಹಾಗಾಗಿ, ಮಾಗಡಿ ತಾಲ್ಲೂಕಿನ ಸೋಲೂರು ಭಾಗ, ರಾಮನಗರ ಅಥವಾ ಚನ್ನಪಟ್ಟಣದಾಚೆಗಿನ ಜಾಗವನ್ನು ನಿಲ್ದಾಣಕ್ಕೆ ಪರಿಶೀಲಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ತುಮಕೂರು ಹಾಗೂ ನಾಗಮಂಗಲ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಾರಣ ಈ ಜಾಗಗಳು ಪರಿಶೀಲನೆ ಹಂತದಲ್ಲಿವೆ.

ನಿರ್ಮಾಣಕ್ಕೂ ನಿಯಮ

ವಿಮಾನ ನಿಲ್ದಾಣ ನಿರ್ಮಾಣ ಅಷ್ಟೊಂದು ಸಲೀಸು ಅಲ್ಲ, ಸಾಕಷ್ಟು ನಿಯಮಗಳನ್ನು ಪಾಲಿಸಿಯೇ ನಿಲ್ದಾಣ ನಿರ್ಮಾಣ ಮಾಡಬೇಕಿದೆ. ವಿಮಾನಗಳ ಸುಗಮ ಹಾರಾಟಕ್ಕೆ ತೊಂದರೆಯಾಗದಂತೆ ಕನಿಷ್ಠ 150 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಇರಬಾರದು ಎಂಬ ನಿಯಮವಿದೆ. ಸದ್ಯ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ನಿರ್ಮಿಸಲು ಮುಂದಾಗಿರುವ ನಿಲ್ದಾಣ ಮತ್ತು ರಾಜ್ಯ ಸರ್ಕಾರ ಹೊಸ ನಿಲ್ದಾಣಕ್ಕೆ ಚಿಂತನೆ ನಡೆಸಿರುವ ಹೊರವಲಯದ ಜಿಲ್ಲೆಗಳು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 150 ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿವೆ. ಹಾಗಾಗಿ, ಹೊಸ ನಿಲ್ದಾಣಕ್ಕೆ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಅನುಮತಿ ಸಿಗುವುದೇ ಎಂಬ ಪ್ರಶ್ನೆ ಎದುರಾಗಿದೆ.

ನಿಲ್ದಾಣಗಳ ನಡುವಣ ಅಂತರವನ್ನು ಕಾರ್ಯಚರಣೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. 150 ಕಿ.ಮೀ. ಇರಲೇಬೇಕು ಎಂಬ ನಿಯಮವೇನಿಲ್ಲ. ಸದ್ಯ ರಾಜ್ಯದಲ್ಲಿರುವ ಕೆಲ ನಿಲ್ದಾಣಗಳು ಅಷ್ಟು ಅಂತರವಿಲ್ಲದೆ ಕಾರ್ಯಾಚರಣೆ ನಡೆಸುತ್ತಿವೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯ ಕೆಐಎ ನಿರ್ವಹಣೆ ಹೊಣೆ ಹೊತ್ತಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಒಪ್ಪಂದದ ಅವಧಿ 2033ಕ್ಕೆ ಅಂತ್ಯಗೊಳ್ಳಲಿದೆ. ಒಪ್ಪಂದದ ಅವಧಿ ಮುಗಿಯುವ ಹೊತ್ತಿಗೆ ರೂಪುರೇಷೆ ಸಿದ್ದಪಡಿಸಿ ಹೊಸ ನಿಲ್ದಾಣ ನಿರ್ಮಿಸುವ ಆಲೋಚನೆ ಸರ್ಕಾರದ್ದಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ, ಬೆಂಗಳೂರಿಗೆ ಪರ್ಯಾಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಸಾಧ್ಯತೆಯ ವರದಿ ನೀಡಲು ಸಚಿವರು ಸೂಚನೆ ನೀಡಿದ್ದಾರೆ. ಆದರೆ ಯಾವ ಜಾಗದಲ್ಲಿ ನಿರ್ಮಾಣ ಮಾಡಬೇಕು ಎಂದು ನಿರ್ದಿಷ್ಟವಾಗಿ ಹೇಳಿಲ್ಲ. ಡಾ. ಎನ್. ಮಂಜುಳಾ, ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ