ಬೆಂಗಳೂರಿನಲ್ಲಿ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಭೂ ಹಗರಣ ಪ್ರಕರಣಗಳ ತನಿಖೆಯನ್ನು ಸಿಒಡಿಗೆ ಒಪ್ಪಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.  
ಜಿಲ್ಲೆ

ಭೂ ಹಗರಣ ಪ್ರಕರಣ ಸಿಒಡಿ ತನಿಖೆಗೆ ಒಪ್ಪಿಸಿ; ಸಚಿವ ಎಂ.ಬಿ. ಪಾಟೀಲರಿಗೆ ಪಟ್ಟಣಶೆಟ್ಟಿ ಮನವಿ

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಜಮೀನು ವಂಚಿಸುತ್ತಿರುವ ಮಾಫಿಯಾಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ ಸಚಿವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಭೂ ಮಾಫಿಯಾಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರು. ಬಳಿಕ ಹೆಚ್ಚುತ್ತಿರುವ ಮೋಸ ಹಾಗೂ ವಂಚನೆ ಜಾಲಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.

ನಕಲಿ ದಾಖಲೆ ಸೃಷ್ಟಿ ಮಾಡಿ ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ಬಡಜನರು ನಿತ್ಯ ಶೋಷಣೆಗೊಳಗಾಗುತ್ತಿದ್ದಾರೆ. ಜಮೀನು ಹಾಗೂ ನಿವೇಶನಗಳ ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ಹಾಗೂ ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳು ಅವ್ಯಾಹತವಾಗಿ ನಡೆದಿವೆ ಎಂದರು.

ಜನರನ್ನು ವಂಚಿಸುವ ವ್ಯವಸ್ಥಿತ ಜಾಲವೇ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಈ ಜಾಲಕ್ಕೆ ಈಗಾಗಲೇ ನೂರಾರು ಜನ ಹಣ-ಆಸ್ತಿ ಕಳೆದುಕೊಂಡಿದ್ದಾರೆ. ಇಂತಹ ವಂಚಕರ ಜಾಲ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ಬಡ ಜನರು ಈಗಾಗಲೇ ಮೋಸ ಹೋಗಿದ್ದಾರೆ. ಕಷ್ಟಪಟ್ಟು ದುಡಿದು, ಸಾಲ-ಸೋಲ ಮಾಡಿ ನಿವೇಶನ, ಜಮೀನು ಖರೀದಿ ಮಾಡುವ ಬಡವರು, ಈ ರೀತಿಯ ವಂಚನೆಗೆ ಒಳಗಾಗಿ ತಮ್ಮ ಆಸ್ತಿ ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ.

ಈ ಜಾಲಕ್ಕೆ ಸಿಲುಕಿ ವಂಚನೆಗೊಳಗಾದವರು ಹಾಗೂ ಜಮೀನು ಕಳೆದುಕೊಂಡವರು ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂದರು.

ಈಗಾಗಲೇ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಈ ಬಗ್ಗೆ ವಿಶೇಷ ತಂಡ ರಚನೆ ಮಾಡುವಂತೆ ಒತ್ತಾಯಿಸಿದ್ದೇನೆ, ಹಲವಾರು ಬಾರಿ ಪತ್ರಿಕಾಗೋಷ್ಠಿ ಮುಖಾಂತರವೂ ಒತ್ತಾಯಿಸಿದ್ದೇನೆ. ತಾವು ಸಹ ಈ ಹಿಂದೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೀರಿ, ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಈ ರೀತಿ ಪ್ರಕರಣಗಳ ತನಿಖೆ ನಡೆಸಿ, ಈ ರೀತಿ ಪ್ರಕರಣ ನಡೆಯದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಸರ್ಕಾರದ ಗಮನ ಸೆಳೆಯಬೇಕು ಎಂದು ಕೋರಿದರು.
ಬಿಜೆಪಿ ಮುಖಂಡ ಜಗದೀಶ ಮುಚ್ಚಂಡಿ ಉಪಸ್ಥಿತರಿದ್ದರು.

ಸಿಒಡಿಗೆ ಒಪ್ಪಿಸಲು ಸಚಿವರ ಭರವಸೆ

ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಭೂ ಹಗರಣ ಸಿಒಡಿ ತನಿಖೆ ನಡೆಸಲು ಸರ್ಕಾರಕ್ಕೆ ನಾನು ಸಹ ಮನವಿ ಮಾಡಿಕೊಳ್ಳುವೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ ನೀಡಿದ್ದಾರೆಂದು ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಿಳಿಸಿದರು.
ಭೂಗರಣಗಳ ಕುರಿತು ಸಮಗ್ರ ಮಾಹಿತಿ ಪಡೆದ ಸಚಿವರು, ಈಗಾಗಲೇ ಈ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಹೀಗಾಗಿ ತನಿಖೆಗೆ ಮನವಿ ಮಾಡುವೆ ಎಂದರು.