ಹನೂರು: ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜಾರಿಗೆ ತಂದಿರುವ ಹಳೆಯ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಮತ್ತು ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮ ಉತ್ತಮ ಯೋಜನೆಯಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.
ಪಟ್ಟಣದ ಪಿಡಬ್ಲುೃಡಿ ಆವರಣದಲ್ಲಿರುವ ಕಟ್ಟಡದಲ್ಲಿ ಸೋಮವಾರ ಅಭಿಲೇಖಾಲಯ ಶಾಖೆಯನ್ನು ಉದ್ಘಾಟಿಸಿ ಭೂ ಸುರಕ್ಷಾ ಮತ್ತು ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹನೂರು ಭಾಗದಲ್ಲಿ ಹೆಚ್ಚಿನ ಭೂ ದಾಖಲೆಗಳು ಹಳೆಯದಾಗಿದ್ದು, ದುಸ್ಥಿತಿಯಲ್ಲಿವೆ. ಇದರಿಂದ ರೈತರು ರೆಕಾರ್ಡ್ ರೂಮ್‌ನಿಂದ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೇ ಕಚೇರಿಗೆ ಅಲೆಯುವಂತಾಗಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಸರ್ಕಾರ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಗೂ ದಾಖಲೆಯನ್ನು ಸಂರಕ್ಷಣೆ ಜತೆಗೆ ಈವರೆಗೂ ಇದ್ದ ಭೂ ದಾಖಲೆಗಳನ್ನು ನೀಡುವಲ್ಲಿ ವಿಳಂಬ, ಸಮಸ್ಯೆಗಳನ್ನು ತೊಡೆದು ಹಾಕಲು ಜಾರಿಗೊಳಿಸುವ ಈ ಮಹತ್ವಕಾಂಕ್ಷಿ ಯೋಜನೆ ರೈತರಿಗೆ ತುಂಬಾ ಅನುಕೂಲವಾಗಲಿದೆ. ಅಲ್ಲದೆ ತ್ವರಿತ ಆಡಳಿತ ಸೇವೆಯನ್ನು ಒದಗಿಸುವ ಪ್ರಯತ್ನ ಇದಾಗಿದೆ. ಈ ಯೋಜನೆಯಿಂದ ದುಸ್ಥಿತಿಯಲ್ಲಿರುವ ಹಳೆಯ ಭೂ ದಾಖಲೆಗಳು ಡಿಜಿಟಲ್ ದಾಖಲೆಯಾಗಿ ಪರಿವರ್ತನೆಯಾಗಲಿದೆ. ಇದರಿಂದ ರೈತರೇ ನೇರವಾಗಿ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆಯಬಹುದಾಗಿದ್ದು, ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ಈ ಯೋಜನೆ ರೈತರಿಗೆ ವರದಾನವಾಗಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಯಾವುದೇ ಸಮಸ್ಯೆಯಾಗದಂತೆ ಮುಂದಿನ 6 ತಿಂಗಳೊಳಗೆ ತಾಲೂಕಿನಲ್ಲಿನ ಎಲ್ಲ ಹಳೆಯ ಭೂ ದಾಖಲೆಗಳನ್ನು ಡಿಜಿಟಲ್ ದಾಖಲೆಯಾಗಿ ಪರಿವರ್ತಿಸಬೇಕು. ಈ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.
ಪಪಂ ಉಪಾಧ್ಯಕ್ಷ ಆನಂದ್‌ಕುಮಾರ್, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಉಪ ತಹಸೀಲ್ದಾರ್ ಸುರೇಖಾ, ಶಿರಸ್ತೇದಾರ್ ಮಹದೇವನಾಯಕ, ಆರ್‌ಐ ಶೇಷಣ್ಣ, ಗ್ರಾಮ ಆಡಳಿತ ಅಧಿಕಾರಿ ಕಾವ್ಯ, ಲೋಕೇಶ್, ವಿಶ್ವೇಶ್ವರಪ್ರಸಾದ್, ಮಂಜೇಶ್, ವಿಜಯಕುಮಾರ್ ಇತರರು ಇದ್ದರು.