ಜಿಲ್ಲೆ

ಭೂ ದಾಖಲೆ ಇಲಾಖೆಯಲ್ಲಿ ಕಡತಗಳೇ ನಾಪತ್ತೆ

ಪ್ರಕರಣದ ತನಿಖೆಗೆ ಒತ್ತಾಯಿಸಿ ರೈತ ಸಂಘ, ಹಸಿರುಸೇನೆಯಿಂದ ಸಂಸದರಿಗೆ ಮನವಿ ಅರ್ಜಿಗಳು ರಾಜಕೀಯ ಬಲಾಢ್ಯರ ಮನೆ ಸೇರಿವೆ ಎಂದು ಆರೋಪ

ಬಾಗೇಪಲ್ಲಿ: ಕ್ಷೇತ್ರದ ರಾಜಕೀಯ ಬಲಾಢ್ಯರ ಮನೆ ಸೇರಿರುವ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನುಗಳ ಮೂಲದಾಖಲೆಗಳನ್ನು ಕಂದಾಯ ಇಲಾಖೆಗೆ ಒಪ್ಪಿಸಬೇಕು. ಹಾಗೆಯೇ, ಭೂ ದಾಖಲೆ ಇಲಾಖೆ ಕಡತಗಳ ನಾಪತ್ತೆ ಪ್ರಕರಣವನ್ನು ಉನ್ನತ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಸಮಿತಿಯಿಂದ ಸಂಸದ ಡಾ.ಕೆ.ಸುಧಾಕರ್‌ಗೆ ಮನವಿಪತ್ರ ಸಲ್ಲಿಸಲಾಯಿತು.

ತಾಲೂಕಿನ ವಿವಿಧ ಪಂಚಾಯಿತಿಗಳಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಳ್ಳಿಯ ಕಡೆ ಸಂಸದರ ನಡೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಗೋವಿಂದರೆಡ್ಡಿ ಮಾತನಾಡಿ, ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನಿನ ಮೇಲೆ ರಾಜಕಾರಣಿಗಳ ಕಣ್ಣು ಬಿದ್ದಿದೆ. ನಮೂನೆ 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಮಂಜೂರಾಗಿರುವ ದರಖಾಸ್ತು ಜಮೀನನ್ನು ಲಪಟಾಯಿಸುವ ದಂಧೆ ನಡೆಯುತ್ತಿದೆ. 20 ವರ್ಷಗಳ ಹಿಂದೆಯೇ ಸರ್ಕಾರ ಸಾಗುವಳಿ ಚೀಟಿ ನೀಡಿದ್ದರೂ ಸಾಗುವಳಿದಾರರ ಹೆಸರಿಗೆ ಅಧಿಕಾರಿಗಳು ಖಾತೆ ಮಾಡಿಕೊಡುತ್ತಿಲ್ಲ ಎಂದರು.

ಕಾರಣ ಕೇಳಿದರೆ ಭೂ ದಾಖಲೆ ಇಲಾಖೆಯಲ್ಲಿ ಮೂಲ ಕಡತಗಳಿಲ್ಲ ಎಂದು ಹಿಂಬರಹ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಕಡತಗಳ ನಾಪತ್ತೆ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ತಾಲೂಕು ಕಚೇರಿ ಅಧಿಕಾರಿಗಳು ಭೂ ಮಾಫಿಯಾ ಹಾಗೂ ಜನಪ್ರತಿನಿಧಿಗಳೊಂದಿಗೆ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಮನವಿ ಸ್ವೀಕರಿಸಿದ ಸಂಸದ ಡಾ. ಕೆ.ಸುಧಾಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸರ್ಕಾರಿ ಜಮೀನು ಕಡತಗಳ ನಾಪತ್ತೆ ಪ್ರಕರಣ ಹಾಗೂ ಕೆಐಎಡಿಬಿ ಸಮಸ್ಯೆ ಕುರಿತು ಚರ್ಚಿಸಿದರು. ಬಾಗೇಪಲ್ಲಿ ತಾಲೂಕು ಕಚೇರಿಯಲ್ಲಿ ಸರ್ಕಾರಿ ಜಮೀನಿನ ಕಡತಗಳು ನಾಪತ್ತೆ ಆಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದರೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂಬುದು ಅರ್ಥವಾಗುತ್ತಿದೆ ಎಂದು ಗರಂ ಆದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರಿನಾಥರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗರಾಜುರೆಡ್ಡಿ, ಸೊಸೈಟಿ ಅಧ್ಯಕ್ಷ ಜೆಪಿರೆಡ್ಡಿ, ರೈತ ಸಂಘದ ತಾಲೂಕು ವಿ.ವೆಂಕಟಶಿವಾರೆಡ್ಡಿ, ಸದಸ್ಯರಾದ ಲಕ್ಷ್ಮೀನರಸಪ್ಪ, ಈಶ್ವರಪ್ಪ, ಚೌಡರೆಡ್ಡಿ, ವೆಂಕಟರಾಮರೆಡ್ಡಿ, ವೆಂಕಟೇಶ್, ನಾರಾಯಣಸ್ವಾಮಿ, ಎಲ್.ಜಿ. ಶ್ರೀಕಾಂತ್ ಮತ್ತಿತರರು ಇದ್ದರು.

ಉದ್ಯಮ ಪಾಲುದಾರಿಕೆಗೆ ಬೇಡಿಕೆ

ತಾಲೂಕಿನ ಕೊಂಡಿರೆಡ್ಡಿಪಲ್ಲಿ ಹಾಗೂ ಹೊಸಹುಡ್ಯ ಗ್ರಾಮಗಳ ರೈತರಿಗೆ ಮಾಹಿತಿ ನೀಡದೆ ಭೂ ಸ್ವಾಧೀನ ಪಡಿಸಿಕೊಂಡು ಪಹಣಿಯಲ್ಲಿ ಕೆಐಎಡಿಬಿ ಎಂದು ನಮೂದಿಸಲಾಗಿದೆ. ಈ ಬಗ್ಗೆ ತಹಸೀಲ್ದಾರ್ ಅವರನ್ನು ಪ್ರಶ್ನಿಸಿದಾಗ ವಾರದೊಳಗೆ ರೈತರ ಹೆಸರಿಗೆ ಪಹಣಿ ಮಾಡಿಕೊಡುವ ಭರವಸೆ ನೀಡಿದ್ದರು. ಈಗ ಒಂದು ತಿಂಗಳಾದರೂ ಬದಲಾಗಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳುತ್ತಿರುವ ಕೆಐಎಡಿಬಿ ಜಮೀನು ಕಳೆದುಕೊಳ್ಳುವವರಿಗೆ 50:50 ಅನುಪಾತದಲ್ಲಿ ಉದ್ಯಮದಲ್ಲಿ ಪಾಲುದಾರಿಕೆ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಗೋವಿಂದರೆಡ್ಡಿ ಸಂಸದರನ್ನು ಒತ್ತಾಯಿಸಿದರು.

ಪಹಣಿ ಬದಲಿಸದಿದ್ದರೆ ಹೋರಾಟ

ಕೊಂಡರೆಡ್ಡಿಪಲ್ಲಿ, ಹೊಸಹುಡ್ಯ ಗ್ರಾಮದ ರೈತರ ಜಮೀನು ಕೆಐಎಡಿಬಿ ಹೆಸರಿಗೆ ಪಹಣಿ ವರ್ಗಾವಣೆ ಆಗಿರುವ ಬಗ್ಗೆ ಈಗಾಗಲೇ ಉಪವಿಭಾಗೀಯ ಅಧಿಕಾರಿ ಜತೆ ಚರ್ಚಿಸಿದ್ದೇನೆ. ಅಧಿಕಾರಿಗಳು ತಪ್ಪು ತಿದ್ದಿಕೊಂಡು ರೈತರ ಕೆಲಸ ಮಾಡಿಕೊಡದಿದ್ದರೆ ಬಾಗೇಪಲ್ಲಿ ತಹಸೀಲ್ದಾರ್ ಕಚೇರಿ ಎದುರು ದೊಡ್ಡಮಟ್ಟದಲ್ಲಿ ಹೋರಾಟ ಮಾಡೋಣ ಎಂದು ಸಂಸದ ಡಾ.ಕೆ.ಸುಧಾಕರ್ ರೈತ ಮುಖಂಡರಿಗೆ ಭರವಸೆ ನೀಡಿದರು.