ಸಾಗರದಲ್ಲಿ ಯಡಜಿಗಳ ಮನೆ ಗ್ರಾಪಂ ಸದಸ್ಯ ಗಿರೀಶ್ ಹಕ್ರೆ ಸುದ್ದಿಗೋಷ್ಠಿ ನಡೆಸಿದರು.  
ಜಿಲ್ಲೆ

ಭೂ ಮಾಫಿಯಾ: ನಕಲಿ ದಾಖಲೆ ಸೃಷ್ಟಿ ವಂಚನೆ

Shivamogga - Desk - Vinayakumar D B

ಸಾಗರ: ತಾಲೂಕಿನ ಯಡಜಿಗಳೆಮನೆ ಗ್ರಾಪಂ ವ್ಯಾಪ್ತಿಯ ಮಂಕಳಲೆ ಗ್ರಾಮದ ಸರ್ಕಾರಿ ಜಾಗವನ್ನು ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿ ಹಲವರಿಗೆ ಮಾರಾಟ ಮಾಡಲಾಗಿದ್ದು, ಅಮಾಕರನ್ನು ವಂಚಿಸಲಾಗಿದೆ ಎಂದು ಗ್ರಾಪಂ ಸದಸ್ಯ ಗಿರೀಶ್ ಹಕ್ರೆ ಆರೋಪಿಸಿದ್ದಾರೆ.

ನಕಲಿ ಹಕ್ಕುಪತ್ರ ಸೃಷ್ಟಿ ಮಾಡಿ ಗ್ರಾಮದ ಸರ್ಕಾರಿ ಜಾಗವನ್ನು ಭೂ ಮಾಫಿಯಾದವರು ಮಾರಾಟ ಮಾಡಿದ್ದಾರೆ. ಸಾಕಷ್ಟು ಜನರು ಈ ನಿವೇಶನ ಖರೀದಿಸಿ ಇದೀಗ ಮೋಸದ ಬಲೆಗೆ ಬಿದ್ದಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸತೀಶ್ ಎಂಬುವರು 33 ಲಕ್ಷ ರೂ. ಕೊಟ್ಟು ನಿವೇಶನ ಖರೀದಿಸಿ, ಮನೆ ಕಟ್ಟಲು ಬ್ಯಾಂಕ್‌ನಿಂದ 30 ಲಕ್ಷ ರೂ. ಸಾಲ ಪಡೆದಿದ್ದಾರೆ. ಇದೀಗ ಅವರು ಖರೀದಿ ಮಾಡಿರುವ ಸ್ಥಳ ನಕಲಿ ಎಂದು ತಿಳಿದುಬಂದಿದ್ದು, ಆಘಾತಗೊಂಡ ಅವರು ಹಾಸಿಗೆ ಹಿಡಿದಿದ್ದಾರೆ. ಇನ್ನು ಹಲವರಿಗೆ ಯಾವುದೋ ಸರ್ವೇ ನಂಬರ್ ತೋರಿಸಿ ಇನ್ಯಾವುದೋ ಜಮೀನು ಮಾರಾಟ ಮಾಡಲಾಗಿದೆ. ಕೆಲವರಿಗೆ ತೋರಿಸಿರುವ ಸ್ಥಳದಲ್ಲಿ ಜಮೀನೇ ಇಲ್ಲ. ಹೀಗೆ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಮತ್ತು ಎಸಿಬಿಗೆ ದೂರು ಸಹ ನೀಡಲಾಗಿದೆ. ಈ ಸಂಬಂಧ ಗ್ರಾಪಂ ವ್ಯಾಪ್ತಿಯಲ್ಲಿ ಶೀಘ್ರವಾಗಿ ಜಾಗೃತಿ ನಾಮಫಲಕ ಅಳವಡಿಸಲಾಗಿದೆ ಎಂದರು.
ಗ್ರಾಮ ಅರಣ್ಯ ಸಮಿತಿ ಮಾಜಿ ಅಧ್ಯಕ್ಷ ಶ್ರೀಧರ್ ಹೆಗಡೆ ಮಾತನಾಡಿ, ಅಕ್ರಮ ನಡೆದಿರುವ ಬಗ್ಗೆ ಹಿಂದೆಯೇ ಸಮಿತಿಯಿಂದ ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಯಾವುದೇ ಕ್ರಮವಾಗಿಲ್ಲ. ಮಂಕಳಲೆ ಭಾಗದಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡುವ ಭೂಮಾಫಿಯಾ ತಲೆೆಎತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದರು.
ಗಣಪತಿ, ಬಿ.ಬಿ.ಲಕ್ಷ್ಮೀನಾರಾಯಣ ಇದ್ದರು.

ನಕಲಿ ಹಕ್ಕುಪತ್ರ ಪ್ರಕರಣದಲ್ಲಿ 15 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿದೆ. 70ಕ್ಕೂ ಹೆಚ್ಚು ಜನರಿಗೆ ನಿವೇಶನ ನೀಡಿರುವುದು ಪತ್ತೆಯಾಗಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಲು ಗ್ರಾಪಂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಾವು ಈ ಬಗ್ಗೆ ಬರುವ ದಿನಗಳಲ್ಲಿ ಹೋರಾಟವನ್ನು ರೂಪಿಸಿ, ಅಗತ್ಯ ಕ್ರಮಕ್ಕಾಗಿ ಸರ್ಕಾರವನ್ನು ಒತ್ತಾಯಿಸಲಿದ್ದೇವೆ. ಸಚಿನ್ ಗೌಡ, ಗ್ರಾಪಂ ಸದಸ್ಯ