ಕಂಪ್ಲಿ: ವಿತರಣಾ ನಾಲೆಯ ಮೇಲ್ಭಾಗದ ರೈತರು ಪಂಪ್‌ಸೆಟ್ ಹಾಕಿಕೊಂಡು, ಸೈಫಾನ್ ಪೈಪು ಅಳವಡಿಸಿಕೊಂಡಿದ್ದರಿಂದ ಕೆಳಭಾಗದ ರೈತರ ಕಡೆಅಂಚಿನ ಭೂಮಿಗೆ ನೀರು ದೊರಕುತ್ತಿಲ್ಲ. ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ನೀರಾವರಿ ನಿಗಮ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ತಾಲೂಕಿನ ಶಂಕರಸಿಂಗ್ ಕ್ಯಾಂಪ್‌ನ ರೈತ ಮುಖಂಡ ಎಲ್.ರಾಮನಾಯ್ಡು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಶಂಕರಸಿಂಗ್ ಕ್ಯಾಂಪ್‌ನಲ್ಲಿ ಶನಿವಾರ 40ಲಕ್ಷ ರೂ. ಜೆಜೆಎಂ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ಜೆ.ಎನ್.ಗಣೇಶ್ ಅವರೊಂದಿಗೆ ಮಾತನಾಡಿ, ಎಂ.1ವಿತರಣಾ ನಾಲೆಗೆ 43ಕ್ಯೂಸೆಕ್ ನೀರು ಹರಿಯಬೇಕಿದ್ದು, ಶಂಕರಸಿಂಗ್ ಕ್ಯಾಂಪ್‌ನಿಂದ ಕೊಂಡಯ್ಯ ಕ್ಯಾಂಪ್‌ನತನಕ 2,500ಎಕೆರೆ ಆಯಕಟ್ಟು ಭೂಮಿಗೆ ನೀರು ಹರಿಯಬೇಕಿದೆ.
ಇದನ್ನೂ ಓದಿ: ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗಳ ತಪಾಸಣೆ: ಮಲಿನ ನೀರು ಹರಿಯುತ್ತಿರುವ ಆರೋಪ, ಪರೀಕ್ಷೆಗಾಗಿ ನೀರಿನ ಮಾದರಿ ಸಂಗ್ರಹ
ಮೇಲ್ಭಾಗದ ನಾನ್ ಆಯಕಟ್ಟಿನ ರೈತರು ಅನಧಿಕೃತವಾಗಿ ನೀರು ಪಡೆದುಕೊಳ್ಳುತ್ತಿದ್ದಾರೆ. ಕೆಳಭಾಗದ ರೈತರ ಭೂಮಿಗೆ ನೀರು ದೊರಕದಿದ್ದರಿಂದ ತೊಂದರೆಯಾಗಿದೆ. ಕಾಲುವೆ ಮೇಲೆ ಪೆಟ್ರೋಲಿಂಗ್ ನಡೆಸಿ ರೈತರಿಗೆ ನೀರಿನ ತೊಂದರೆಯಾಗದಂತೆ ಕ್ರಮವಹಿಸಬೇಕು. ಭೂಮಿಗೆ ನೀರೊದಗಿಸಿ ಇಲ್ಲವೇ ಎಕರೆಗೆ 25ಸಾವಿರ ರೂ. ನಷ್ಟ ಪರಿಹಾರ ವಿತರಿಸಬೇಕು. ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.
ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ, ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಬಗೆಹರಿಸಬೇಕು. ಯಾವುದೇ ರೈತರಿಗೆ ನೀರಿನ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ಸೂಚನೆ ನೀಡಿದರು. ನಂತರ ಶಾಸಕ ಮಾತನಾಡಿ, ಕಂಪ್ಲಿ ತುಂಗಭದ್ರಾ ನದಿ ಸೇತುವೆ ನಿರ್ಮಾಣ, ಕಂಪ್ಲಿ-ಕುರುಗೋಡುಗಳಲ್ಲಿ ಯುಜಿಡಿ ಸೌಲಭ್ಯಕ್ಕಾಗಿ, ಪಟ್ಟಣದಲ್ಲಿ ಅಗ್ನಿಶಾಮಕದಳ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ದೇವಸಮುದ್ರ ರಸ್ತೆಯಲ್ಲಿ ಬಸ್‌ಡಿಪೋಕ್ಕಾಗಿ 5ಎಕರೆ ಭೂಮಿ ಗುರುತಿಸಲಾಗಿದೆ ಎಂದರು.