ಬೆಂಗಳೂರು: ರಾಜಧಾನಿಯ ಸಂಚಾರದಟ್ಟಣೆಗೆ ಪರಿಹಾರ ಎನ್ನುವಂತೆ ಉಪನಗರ ರೈಲು ಯೋಜನೆ ಜಾರಿಗೆ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿದೆ. ಆದರೆ ಅನುದಾನ ಹಂಚಿಕೆ ವಿಚಾರದಲ್ಲಿ ಕೆಲವು ಗೊಂದಲಗಳಿದ್ದು, ನಿವಾರಿಸದಿದ್ದರೆ ರಾಜ್ಯ ಸರ್ಕಾರಕ್ಕೆ ಯೋಜನೆಯ ಅನುಷ್ಠಾನ ಹೊರೆಯಾಗುವ ಸಾಧ್ಯತೆಗಳಿವೆ.
ಹಲವು ವರ್ಷಗಳ ಬೇಡಿಕೆಯಾಗಿರುವ ಉಪನಗರ ರೈಲು ಯೋಜನೆ ಜಾರಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಅದಕ್ಕೆ ಪೂರಕವಾಗಿ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಕೇಂದ್ರ ಬಜೆಟ್ನಲ್ಲಿ ಯೋಜನೆಗಾಗಿ ಅನುದಾನ ಮೀಸಲಿಡಲಾಗಿದೆ. ಆದರೆ, ಈ ಹಿಂದೆ ಕೇಂದ್ರ ಸರ್ಕಾರ (ರೈಲ್ವೆ ಇಲಾಖೆ) ಅನುದಾನದ ಬದಲು ಭೂಮಿ ನೀಡುವ ಕುರಿತು ರ್ಚಚಿಸಿತ್ತು. ಈಗಲೂ ಇದೇ ಬಗೆಯ ಚರ್ಚೆಗಳು ಮುಂದುವರಿಯುವ ಸಾಧ್ಯತೆಗಳಿವೆ. ಹಾಗೇನಾದರೂ, ಆದರೆ ರಾಜ್ಯ ಸರ್ಕಾರಕ್ಕೆ ಯೋಜನೆಯ ಅನುಷ್ಠಾನದಲ್ಲಿ ಹೆಚ್ಚಿನ ಹೊರೆ ಬೀಳಲಿದೆ.
ರೈಲ್ವೆ ಇಲಾಖೆಯ 250 ಹೆಕ್ಟೇರ್ ಭೂಮಿ: ಯೋಜನೆಗಾಗಿ 355.28 ಹೆಕ್ಟೇರ್ ಭೂಮಿಯ ಅವಶ್ಯಕತೆಯಿದೆ. ಮಾರ್ಗ ನಿರ್ವಣ, ವಿಸ್ತರಣೆ, ನಿಲ್ದಾಣಗಳ ನಿರ್ಮಾಣ ಮತ್ತಿತರ ಕಾರ್ಯಗಳಿಗಾಗಿ ಹೆಚ್ಚುವರಿ ಭೂಮಿ ವಶಕ್ಕೆ ಪಡೆಯಬೇಕಿದೆ. ಅದರಲ್ಲಿ 250 ಹೆಕ್ಟೇರ್ ಭೂಮಿ ರೈಲ್ವೆ ಇಲಾಖೆಯದ್ದಾಗಿದೆ. ಉಳಿದ 34.69 ಹೆಕ್ಟೇರ್ ಭೂಮಿ ರಾಜ್ಯ ಸರ್ಕಾರದ್ದಾಗಿದ್ದರೆ, ಖಾಸಗಿಯವರಿಗೆ ಸೇರಿದ 70.59 ಹೆಕ್ಟೇರ್ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಒಟ್ಟಾರೆ ಭೂಸ್ವಾಧೀನಕ್ಕೆ 2,129 ಕೋಟಿ ರೂ.ಗಳ ಅವಶ್ಯಕತೆಯಿದೆ. ಆದರೆ, ರೈಲ್ವೆ ಇಲಾಖೆ ಭೂಮಿ ನೀಡುತ್ತಿರುವ ಕಾರಣ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.
ರಾಜ್ಯ ಸರ್ಕಾರವೇ ಹೊಣೆ
ಉಪನಗರ ರೈಲು ಯೋಜನೆ ಜಾರಿಗೆ ಅಗತ್ಯವಾದ 18,600 ಕೋಟಿ ರೂ.ಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.20 ಮತ್ತು ಉಳಿದ ಶೇ.60 ಹಣವನ್ನು ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳಿಂದ ಪಡೆಯಲು ನಿರ್ಧರಿಸಲಾಗಿದೆ. ಆದರೆ, ಕೇಂದ್ರ ತನ್ನ ಪಾಲಿನ ಶೇ.20 ಅನುದಾನವನ್ನು ತಾನು ಕೊಡುವ ಭೂಮಿಗೆ ಸರಿದೂಗಿಸಿದರೆ, ಉಳಿದೆಲ್ಲ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಬೀಳಲಿದೆ.