ಜಿಲ್ಲೆ

ಕೃಷಿ ಜಮೀನು ಬೈಪಾಸ್‌ಗಾಗಿ ಒತ್ತುವರಿ: ಸಿಎಂ ಎದುರು ಅಳಲು ತೋಡಿಕೊಂಡ ವೃದ್ಧ

ಕೆ.ಎನ್.ರಾಘವೇಂದ್ರ

ನಾಗಮಂಗಲ: ಬೈಪಾಸ್ ರಸ್ತೆಗಾಗಿ ತಮ್ಮ ಕೃಷಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಸಮಸ್ಯೆ ಬಗೆಹರಿಸಿಕೊಡುವಂತೆ ತಾಲೂಕಿನ ರೈತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ನಡೆದ ಜನತಾದರ್ಶನದಲ್ಲಿ ಅಹವಾಲು ಸಲ್ಲಿಸಿರುವ 96 ವರ್ಷದ ರೈತ ಪರಂಧಾಮಯ್ಯ, ನಾಗಮಂಗಲದಿಂದ ತಾಳವಾಡಿಯ ಮಾರ್ಗ ಮಧ್ಯೆ ತಮ್ಮ ಜಮೀನು ಇದೆ. ಆದರೆ ಒತ್ತುವಾರಿ ಮಾಡಿಕೊಂಡಿರುವುದರಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಿಎಂ, ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಆನ್‌ಲೈನ್ ಮೂಲಕ ಮಾಹಿತಿ ಕೊಟ್ಟು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೆ 96 ವರ್ಷದ ಪರಂದಾಮಯ್ಯ ಜೀವನೋತ್ಸಾಹಕ್ಕೆ ಮೆಚ್ಚುಗೆ ಸೂಚಿಸಿ ಇನ್ನಷ್ಟು ಕಾಲ ಆರೋಗ್ಯವಾಗಿ ಗಟ್ಟಿಯಾಗಿರಿ ಎಂದು ಶುಭ ಕೋರಿದ್ದಾರೆ.

ಇನ್ನು ದೂರು ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಡಿಸಿ ಡಾ.ಕುಮಾರ, ಜನತಾದರ್ಶನದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಏಳು ದೂರು ಬಂದಿದೆ. ಅವುಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದಿದ್ದಾರೆ.