ನಿಡಗುಂದಿ: ಕೊಲ್ಹಾರ, ಬಸವನಬಾಗೇವಾಡಿ, ನಿಡಗುಂದಿ ತಾಲೂಕಿನ ರೈತರ ಜಮೀನುಗಳಲ್ಲಿ ಅಳವಡಿಸುತ್ತಿರುವ 765 ಕೆವಿ ವಿದ್ಯುತ್ ಗೋಪುರಗಳಿಗೆ ಸಂಬಂಧಿಸಿ ರೈತರ ಬೇಡಿಕೆ ಈಡೇರುವವರೆಗೆ ಕಂಬ ಅಳವಡಿಕೆ ಸ್ಥಗಿತ ಮಾಡುವಂತೆ ಆಗ್ರಹಿಸಿ ನಿಡಗುಂದಿ ತಾಲೂಕು ರೈತರು ತಹಸೀಲ್ದಾರ್ ಎ.ಡಿ.ಅಮರವಾದಗಿ ಮೂಲಕ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೆ.26ರಂದು ದರ ನಿರ್ಧರಣಾ ಸಮಿತಿ ಸಭೆ ನಡೆಸಲಾಗಿತ್ತು. ಅಂದಿನ ಸಭೆಯಲ್ಲಿ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ತಾಲೂಕುಗಳ ರೈತರು ಪಾಲ್ಗೊಂಡು ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದರು.
ಬೇಡಿಕೆ ಈಡೇರುವವರೆಗೆ ಕಂಬ ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ಆದರೆ, ಗುತ್ತಿಗೆ ಪಡೆದ ಕಂಪನಿಗಳು ತಾಲೂಕಿನ ಜಮೀನುಗಳಲ್ಲಿ ಏಕಾಏಕಿ ಕಂಬ ಅಳವಡಿಕೆಗೆ ಸಜ್ಜಾಗಿದ್ದು, ರೈತರನ್ನು ನಿದ್ದೆಗೆಡುವಂತೆ ಮಾಡಿದೆ.
ರೈತರ ಸಹಮತ ಪಡೆಯದೆ ಒಂದೇ ಕಂತಿನಲ್ಲಿ ಪರಿಹಾರ ನೀಡಬೇಕು, ಕಂಬದ ಜತೆಗೆ ಹಾದುಹೋದ ತಂತಿಗಳ ಕೆಳ ಭಾಗದಲ್ಲಿನ ಜಾಗಕ್ಕೆ ಕಂಬದಷ್ಟೇ ಪರಿಹಾರ ನೀಡಬೇಕು, ಗೋಪುರ ಅಳವಡಿಕೆ ಸಮಯದಲ್ಲಿ ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕು, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತರ ಸಮಾಲೋಚನೆ ಸಭೆ ಕರೆದು ದರ ಹಾಗೂ ಪರಿಹಾರದ ಬಗ್ಗೆ ನಿರ್ಧರಿಸಬೇಕು.
ರೈತರ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸುವ ಮುನ್ನವೇ ಕಂಬ ಹಾಕಲು ಅವಕಾಶ ನೀಡಬಾರದು. ಈಗಾಗಲೇ ಕೆಲ ಜಮೀನುಗಳಲ್ಲಿ ರೈತರ ಮೇಲೆ ದೌರ್ಜನ್ಯ ನಡೆಸಿ ಕಂಬದ ಅಡಿಪಾಯ ಹಾಕುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿ ಅದನ್ನು ತಡೆಹಿಡಿಯುವ ಆದೇಶ ಮಾಡಬೇಕು ಎಂದು ನೂರಾರು ರೈತರು ಮನವಿ ಮಾಡಿದ್ದಾರೆ.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಶ್ಯಾಮರಾವ್ ಪರ್ವತೀಕರ, ಇಬ್ರಾಹಿಂ ವಾಲಿಕಾರ, ಗೌಡಪ್ಪಗೌಡ ಹಂಗರಗಿ, ಮಹಾಂತೇಶ ಹಂಗರಗಿ, ರಮೇಶ ಹೋಗೋಡಿ, ಬಸವರಾಜ ಡಮನಾಳ, ಎಂ.ಕೆ ಮುತ್ತಣ್ಣವರ, ಕೆ.ವೈ.ಉಕ್ಕಲಿ, ಶರಣಗೌಡ ಗೌಡರ, ಭೀಮಣ್ಣ ಮುರನಾಳ, ಕುಮಾರ ವಂದಾಲ ಹಾಗೂ ಮೂರೂ ತಾಲೂಕುಗಳ ರೈತರಿದ್ದರು.