ಜಿಲ್ಲೆ

ಜಮೀನು ವಿವಾದ ತಮ್ಮನಿಂದಲೇ ಅಣ್ಣನ ಕೊಲೆ

ಕೋಲಾರ ಡೆಸ್ಕ್

ಬಂಗಾರಪೇಟೆ: ತಾಲೂಕಿನ ರಾಮಾಪುರದಲ್ಲಿ ಸಹೋದರರ ನಡುವಿನ ಜಮೀನು ವಿವಾದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಅಣ್ಣನನ್ನು ತಮ್ಮನೇ ಕೊಲೆ ಮಾಡಿದ್ದಾನೆ.

ವೆಂಕಟಾಚಲಪತಿ (50) ಕೊಲೆಯಾದವ. ಆರೋಪಿ ತಮ್ಮ ಮುನಿರಾಜುನನ್ನು ಬಂಧಿಸಲಾಗಿದೆ.

ವೆಂಕಟಾಚಲಪತಿ ಮತ್ತು ಮುನಿರಾಜು ನಡುವೆ ಆಸ್ತಿ ವಿಚಾರದಲ್ಲಿ ವೈಷಮ್ಯ ಬೆಳೆಸಿಕೊಂಡಿದ್ದರು. ಆಸ್ತಿ ಪಾಲಿಗಾಗಿ ಕೋರ್ಟ್​ ಮೆಟ್ಟಿಲೇರಿದ್ದರು. ಇಬ್ಬರನ್ನೂ ಕೂರಿಸಿ ಹಲವು ಬಾರಿ ರಾಜಿ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ 6ಗಂಟೆ ಸುಮಾರಿಗೆ ಕುರಿ ಶೆಡ್​ನಲ್ಲಿದ್ದ ತಮ್ಮನ ಬಳಿಗೆ ಆಸ್ತಿ ವಿವಾದ ಬಗ್ಗೆ ಮಾತನಾಡಲು ಅಣ್ಣ ಬಂದಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಮುನಿರಾಜು ಚಾಕುವಿನಿಂದ ವೆಂಕಟಾಚಲಪತಿ ಹೊಟ್ಟೆ, ಎದೆ, ಕುತ್ತಿಗೆ ಭಾಗಕ್ಕೆ ಇರಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

ಗ್ರಾಮದಲ್ಲಿ ವಿಷಯ ಹರಡಿ ಬೂದಿಕೋಟೆ ಪೊಲೀಸರ ಗಮನಕ್ಕೆ ಬಂದಿದೆ. ಘಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮುನಿರಾಜು ಮತ್ತು ಕೊಲೆಗೆ ಉಪಯೋಗಿಸಿದ್ದ ಚಾಕು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕೆಜಿಎ್​ ಎಸ್​ಪಿ ಶಿವಾಂಶು ರಜಪೂತ್​ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಬೂದಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.