ಕೋಲಾರ ತಾಲೂಕು ಚುಂಚದೇನಹಳ್ಳಿ ಬಳಿ ಒತ್ತುವರಿ ಜಮೀನನ್ನು ತೆರವುಗೊಳಿಸಿ ಅರಣ್ಯ ಇಲಾಖೆಯವರು ಸ್ವಾಧಿನಪಡಿಸಿಕೊಂಡು ಸಸಿ ನಾಟಿ ಮಾಡುತ್ತಿರುವುದು. 
ಜಿಲ್ಲೆ

ಸರ್ಕಾರಿ ಆಸ್ತಿ ರಕ್ಷಣೆಗೆ ಲ್ಯಾಂಡ್​ ಬೀಟ್​

ಎನ್​.ಮುನಿವೆಂಕಟೇಗೌಡ, ಕೋಲಾರ
ಜಿಲ್ಲೆಯಲ್ಲಿರುವ ಸರ್ಕಾರಿ ಜಮೀನು ಮತ್ತು ಆಸ್ತಿಗಳನ್ನು ಸಂರಕ್ಷಣೆ ಮಾಡುವಲ್ಲಿ ಜಿಲ್ಲೆ ಯಶಸ್ಸು ಕಂಡಿದ್ದು, ರಾಜ್ಯದಲ್ಲಿಯೇ ಮುಂಚೂಣಿ ಜಿಲ್ಲೆಯಾಗಿದೆ. ಸರ್ಕಾರಿ ಜಮೀನುಗಳ ಒತ್ತುವರಿ ಮಾಡಿಕೊಂಡಿರುವ ಸಮಸ್ಯೆ ಮತ್ತು ಇವುಗಳನ್ನು ತೆರವುಗೊಳಿಸಲು ಹಲವು ವರ್ಷಗಳ ಕಾನೂನು ಹೋರಾಟಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲ್ಯಾಂಡ್​ ಬೀಟ್​ ಆ್ಯಪ್​ ಬಳಸಿಕೊಂಡು, ವಿವಿಧ ಜಮೀನುಗಳಲ್ಲಿರುವ ಸರ್ಕಾರಿ ಭೂಮಿ ಜಿಯೋ ಫೆನ್ಸಿಂಗ್​ ಮಾಡಿ, ರಕ್ಷಣೆ ಮಾಡುವ ಕಾರ್ಯದಲ್ಲಿ ರಾಜ್ಯದಲ್ಲೇ ಕೋಲಾರ ಮುಂಚೂಣಿ ಸ್ಥಾನದಲ್ಲಿದೆ.


ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳು ಇರುವ ಒಟ್ಟು 34,375 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಪೈಕಿ 27,451 ಸ್ಥಳಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ, ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಈ ಆಸ್ತಿಗಳಿಗೆ ಜಿಯೋ ಫೆನ್ಸಿಂಗ್​ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಇದು ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯಾಗಿದೆ. ಈ ಜಮೀನುಗಳಲ್ಲಿರುವ ಸರ್ಕಾರಿ ಆಸ್ತಿಗಳ ಬಗ್ಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ಲ್ಯಾಂಡ್​ ಬೀಟ್​ ಆ್ಯಪ್​ ಮೂಲಕ ವರದಿ ನೀಡಿದ್ದು, ಆ ವರದಿಯನ್ನು ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್​ಗಳು ಅಂತಿಮಗೊಳಿಸುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ 27,451 ಸರ್ಕಾರಿ ಆಸ್ತಿಗಳಿಗೆ ಸಂಪೂರ್ಣ ಜಿಯೋ ಫೆನ್ಸಿಂಗ್​ ಮಾಡಲಾಗಿದೆ. ಈ ಮೂಲಕ ಜಿಲ್ಲೆಯ ಈ ಸರ್ಕಾರಿ ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ.


ಇದುವರೆಗೆ ಕೋಲಾರ ತಾಲೂಕಿನಲ್ಲಿನ 8,920 ಸರ್ಕಾರಿ ಆಸ್ತಿಗಳಲ್ಲಿ , 7,067 ಆಸ್ತಿಗಳಿಗೆ ಜಿಯೋ ಫೆನ್ಸಿಂಗ್​ ಕಾರ್ಯ ಮಾಡಲು ಸ್ಥಳ ಪರಿಶೀಲನೆ ನಡೆಸಿದ್ದು, ಶೇ.85.72 ಆಸ್ತಿಗಳಿಗೆ ಈಗಾಗಲೇ ಸಂಪೂರ್ಣ ಜಿಯೋ ಫೆನ್ಸಿಂಗ್​ ಮಾಡಲಾಗಿದೆ. ಬಂಗಾರಪೇಟೆ ತಾಲೂಕಿನ 3,320 ಸರ್ಕಾರಿ ಆಸ್ತಿಗಳ ಪೈಕಿ 2,835 ಆಸ್ತಿಗಳಿಗೆ, ಕೆಜಿಎಫ್​ ತಾಲೂಕಿನ 2,895 ಆಸ್ತಿಗಳಲ್ಲಿ 2,421 ಆಸ್ತಿಗಳಿಗೆ, ಮುಳಬಾಗಿಲು ತಾಲೂಕಿನ 7,294 ಪೂಕಿ 5,883, ಶ್ರೀನಿವಾಸಪುರ 6,394ರ ಪೈಕಿ 5394 ಆಸ್ತಿಗಳಿಗೆ ಹಾಗೂ ಮಾಲೂರು ತಾಲೂಕಿನ 5,552 ಆಸ್ತಿಗಳಲ್ಲಿ 4,602 ಆಸ್ತಿಗಳಿಗೆ, ಈಗಾಗಲೇ ಸಂಪೂರ್ಣ
ಜಿಯೋ ಫೆನ್ಸಿಂಗ್​ ಮಾಡಲಾಗಿದೆ.


ಲ್ಯಾಂಡ್​ ಬೀಟ್​ ಆ್ಯಪ್​ನಲ್ಲಿ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಮೀನುಗಳಾದ ಗೋಮಾಳ, ಹುಲ್ಲು ಬನ್ನಿ ಖರಾಬು, ಸರ್ಕಾರಿ ಫಡಾ, ಸರ್ಕಾರಿ ಖರಾಬು, ಸರ್ಕಾರಿ ಬೀಳು, ದನಗಳಿಗೆ ಮುಫತ್ತು, ಸರ್ಕಾರಿ ದಾರಿ, ಗುಂಡು ತೋಪು ಇತ್ಯಾದಿ ಹಾಗೂ ಸರ್ಕಾರಿ ಕೆರೆ ಮತ್ತು ಸರ್ಕಾರಿ ಸ್ಮಶಾನಗಳನ್ನು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು ಲ್ಯಾಂಡ್​ ಬೀಟ್​ ತಂತ್ರಾಂಶದಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ಮಾಡಿದ್ದಾರೆ.


ಸರ್ಕಾರಿ ಜಮೀನುಗಳ ಪೈಕಿ ಅರಣ್ಯ ಜಮೀನುಗಳು, ಇತರ ಯೋಜನೆಗಳಿಗೆ ಸ್ವಾಧಿನಪಡಿಸಿಕೊಂಡ ಜಮೀನುಗಳು (ಭೂಸ್ವಾಧಿನ), ಶಾಲೆಗಳು ಮತ್ತು ಆಸ್ಪತ್ರೆಗಳು ಇತ್ಯಾದಿ ಇಲಾಖೆಗಳ ಜಮೀನುಗಳನ್ನು ಒಳಗೊಂಡಿದ್ದು, ಇಂತಹ ಜಮೀನುಗಳನ್ನು ಕ್ಷೇತ್ರ ಪರಿಶೀಲನೆಗಾಗಿ ಮುಂದಿನ ದಿನಗಳಲ್ಲಿ ಆಯಾ ಇಲಾಖೆಗಳಿಗೆ ಕಳುಹಿಸಲು ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಲಾಗುತ್ತಿದೆ.


ಈಗಾಗಲೇ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದಲ್ಲಿ ಅದನ್ನು ತೆರವುಗೊಳಿಸುವ ಪ್ರಕ್ರಿಯೆಯು ದೀರ್ಘವಾಗಿರುವ ಜೊತೆಗೆ ಸಂಕೀರ್ಣವಾಗಿದೆ. ಸರ್ಕಾರದ ಸೂಚನೆಯಂತೆ ಲ್ಯಾಂಡ್​ ಬೀಟ್​ ಆ್ಯಪ್​ ಮೂಲಕ ಜಿಲ್ಲೆಯಲ್ಲಿನ ಸರ್ಕಾರಿ ಭೂಮಿಗಳನ್ನು ಗುರುತಿಸಿ, ಜಿಯೋ ಫೆನ್ಸಿಂಗ್​ ಮಾಡುವ ಮೂಲಕ ಅವುಗಳನ್ನು ಸಂರಕ್ಷಿಸುವ ಕಾರ್ಯ ಸಮರೋಪಾದಿಯಲಿ ಕೈಗೊಂಡಿದ್ದು, ಈ ಕಾರ್ಯ ಪೂರ್ಣಗೊಂಡ ನಂತರ ಜಿಲ್ಲೆಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನ ನಿಖರ ಪ್ರಮಾಣದ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಮುಂದಿನ ದಿನಗಳಲ್ಲಿ ಇವುಗಳ ಅತಿಕ್ರಮಣವಾಗದಂತೆ ತಡೆಯುವ ಮೂಲಕ ಸಾರ್ವಜನಿಕ ಉದ್ದೇಶಗಳಿಗೆ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ದೊರೆಯಲಿದೆ.

ಸರ್ಕಾರಿ ಜಾಗ ರಕ್ಷಣೆಗೆ ಸರ್ಕಾರ ಆದೇಶ ಮಾಡಿದ್ದು, ಲ್ಯಾಂಡ್​ ಬೀಟ್​ ಆ್ಯಪ್​ ಸಹಾಯದಿಂದ ಜಿಲ್ಲೆಯಲ್ಲಿ ಶೇ.92 ಸರ್ಕಾರಿ ಜಾಗ ಉಳಿಸಿ ಅದಕ್ಕೆ ಫೆನ್ಸಿಂಗ್​ ಹಾಕಲಾಗಿದೆ. ತಂತ್ರಜ್ಞಾನ ಬಳಸಿ ಲ್ಯಾಂಡ್​ ಬೀಟ್​ ಆ್ಯಪ್​ ಮೂಲಕ ಸ್ಥಳದಲ್ಲಿಯೇ ಅಪ್​ಲೋಡ್​ ಮಾಡಿ, ಸ್ಥಳಕ್ಕೆ ಗಡಿ ಗುರುತಿಸುವ ಕೆಲಸ ಮಾಡಲಾಗಿದೆ. ಒತ್ತುವರಿದಾರರನ್ನು ತೆರವುಗೊಳಿಸಲಾಗಿದ್ದು, ಇನ್ನು ಮುಂದೆ ಒತ್ತುವರಿ ಮಾಡಲು ಅವಕಾಶ ಇಲ್ಲದ ರೀತಿ ಜಾಗವನ್ನು ಸಂಪೂರ್ಣ ಆ್ಯಪ್​ಗೆ ಅಪ್​ಲೋಡ್​ ಮಾಡಿರುವುದರಿಂದ ಸ್ಥಳಕ್ಕೆ ಹೋಗಿ ಆ್ಯಪ್​ ಓಪನ್​ ಮಾಡಿದರೆ ಜಾಗದ ಗಡಿ ಗುರ್ತಿಸಬಹುದಾಗಿದೆ. ಆ ಕೆಲಸವನ್ನು ಜಿಲ್ಲೆಯ ಎಲ್ಲ ಕಂದಾಯ ಇಲಾಖೆಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಶೇ.100 ಸಾಧನೆ ಗುರಿ ನಮ್ಮದಾಗಿದೆ.

ಅಕ್ರಂಪಾಷಾ, ಜಿಲ್ಲಾಧಿಕಾರಿ ಕೋಲಾರ