ಜಿಲ್ಲೆ

ಸರ್ವೇ ನಡೆಸುವಂತೆ ಒತ್ತಾಯ: ಮಂಡ್ಯದಲ್ಲಿ ಕೊಳಗೇರಿ ಅಭಿವೃದ್ದಿ ಮಂಡಳಿಗೆ ಮುತ್ತಿಗೆ

ಮಂಡ್ಯ: ಮದ್ದೂರು ತಮಿಳು ಕಾಲನಿಯನ್ನು ಕೊಳಗೇರಿ ಅಭಿವೃದ್ದಿ ಮಂಡಳಿಗೆ ಹಸ್ತಾಂತರಿಸಿ ಸರ್ವೇ ನಡೆಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಕ್ರಮ ಕೈಗೊಳ್ಳದ ನಗರದ ಮಂಡ್ಯ ಕೊಳಗೇರಿ ಅಭಿವೃದ್ದಿ ಮಂಡಳಿ ಕಚೇರಿಗೆ ಶನಿವಾರ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಹೋರಾಟಗಾರರು ಈ ಹಿಂದೆ ಅನಿರ್ದಿಷ್ಟಾವದಿ ಧರಣಿ ಕೈಗೊಂಡಾಗ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಧರಣಿನಿರತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಕೂಡಲೇ ಮದ್ದೂರು ತಮಿಳು ಕಾಲನಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದರು. ಆದರೆ ಮಂಡಳಿಯ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶದಂತೆ ನಡೆದುಕೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ಕೊಳಗೇರಿ ಅಭಿವೃದ್ದಿ ಮಂಡಳಿ ಅಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿದ್ದು, ವಸತಿ ರಹಿತರ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಅವರನ್ನು ವರ್ಗಾವಣೆ ಮಾಡಿ, ದಕ್ಷ ಅಧಿಕಾರಿಗಳನ್ನು ನೇಮಕ ಮಾಡಬೇಕು. ಸರ್ಕಾರಿ ಜಾಗಗಳಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳ ಸ್ಥಳಕ್ಕೆ ಆರ್‌ಟಿಸಿ ಬದಲಾವಣೆಯ ಕೆಲಸ ತುರ್ತು ಆಗಬೇಕಿದೆ. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಿಸುವ ಸರ್ವೆ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.

ವಸತಿ ರಹಿತ ಕುಟುಂಬಗಳು ಮತ್ತು ಕೊಳಚೆ ಪ್ರದೇಶಗಳನ್ನು ಗುರುತಿಸಿ ಜಿಲ್ಲಾದ್ಯಂತ ಎಷ್ಟು ವಸತಿಗಳು ಬೇಕಿದೆ ಎನ್ನುವುದರ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಿ ಡಿಪಿಆರ್ ಮಾಡಿ ಕಳಿಸಬೇಕು. ಜತೆಗೆ ವಸತಿ ಸೌಲಭ್ಯವನ್ನು ನೀಡಬೇಕು ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚುವರಿ ಕುಟುಂಬಗಳು ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವುದನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡುವುದರ ಜತೆಗೆ ಅಗತ್ಯವಿರುವ ಭೂಮಿಯನ್ನು ಮಂಜೂರು ಮಾಡಿಸಿ ಹೆಚ್ಚುವರಿ ಕುಟುಂಬಗಳಿಗೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ವೈದುನ, ಉಮಾ, ಚಂದ್ರಶೇಖರ್, ರೂಪ, ಲತಾ, ಚಲುವೆ ಇತರರಿದ್ದರು.