ಜಿಲ್ಲೆ

ಮಾ.11ರಂದು ಬೆಂಗಳೂರು ಚಲೋ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಸಿದ್ದರಾಜು ಮಾಹಿತಿ

ಮಂಡ್ಯ: ನಿವೇಶನ ರಹಿತರ ಭೂಮಿಯ ಹಕ್ಕು ಸಾಮಾಜಿಕ ನ್ಯಾಯದ ಪ್ರತಿಪಾದನೆಗಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಮಾ.11ರಂದು ಬೆಂಗಳೂರು ಚಲೋ ಆಯೋಜಿಸಲಾಗಿದೆ ಎಂದು ಸಮಿತಿಯ ಸದಸ್ಯ ಸಿದ್ದರಾಜು ತಿಳಿಸಿದರು.

ಸರ್ಕಾರ ಲಕ್ಷ ಲಕ್ಷ ನಿವೇಶನ ಹಂಚಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಬಂಡವಾಳ ಶಾಹಿಗಳಿಗೆ ನೂರಾರು ಎಕರೆ ಜಮೀನು ನೀಡಿರುವುದು ಬಿಟ್ಟರೆ, ಬಡವರಿಗೆ ನಿವೇಶನ ನೀಡಿ, ವಸತಿ ಸೃಷ್ಠಿಸಿಕೊಳ್ಳುವ ಅವಕಾಶವನ್ನು ನೀಡುತ್ತಿಲ್ಲ. ಸಂವಿಧಾನ, ಸಮಾಜವಾದದ ಹೆಸರಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಸಾಮಾಜಿಕ ನ್ಯಾಯವನ್ನು ಪಾಲಿಸಿ ಭೂರಹಿತರಿಗೆ ಭೂಮಿ ಹಂಚುವ ಕೆಲಸ ಮಾಡಿ ಬದ್ಧತೆ ಮೆರೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ವಸತಿ, ನಿವೇಶನ ಹೊಂದಿರದ ಲಕ್ಷಾಂತರ ಬಡವರು ಸರ್ಕಾರಿ ಜಾಗದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲು ನಿರ್ಮಿಸಿ ವಾಸ ಮಾಡುತ್ತಿದ್ದು, ಅವುಗಳ ಸಕ್ರಮಕ್ಕೆ ಯೋಜನೆಯನ್ನು ಸರ್ಕಾರವೇ ತಂದಿದೆ. ಆದರೆ ಬಡವರಿಂದ ಅರ್ಜಿ ಸ್ವೀಕರಿಸದೇ, ಹಕ್ಕುಪತ್ರವನ್ನೂ ನೀಡದೇ ಸತಾಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 11ರಂದು ಪ್ರತಿಭಟನೆ ನಡೆಸಿ, ಮಾ.12 ಮತ್ತು 13ರಂದು ಜನಸಂಘಟನೆಗಳ ಬಜೆಟ್ ಅಧಿವೇಶನ ನಡೆಸಿ ಸರ್ಕಾರಕ್ಕೆ ಆಗ್ರಹ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಶ್ರಮಿಕ ಶಕ್ತಿಯ ರಾಜ್ಯಾಧ್ಯಕ್ಷ ವರದರಾಜೇಂದ್ರ, ಕರ್ನಾಟಕ ಜನಶಕ್ತಿಯ ಪೂರ್ಣಿಮಾ, ಚಂದ್ರಶೇಖರ್, ರಾಜು, ನಿಂಗಮ್ಮ, ರತ್ನಾ ಇದ್ದರು.