ಸಂಡೂರು: ಸಮೀಪದ ಧರ್ಮಾಪುರ ಬಳಿ ರೈಲ್ವೆ ಲೈನ್ ಮತ್ತು ಸ್ಲೈಡಿಂಗ್ ನಿರ್ಮಾಣ ಮಾಡಲು ಭೂಸ್ವಾಧಿನ ಪ್ರಕ್ರಿಯೆಯನ್ನು ವಿರೋಧಿಸಿ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಮನವಿ ಸಲ್ಲಿಸಿದರು.
ನಿರ್ವತ್ತ ಶಿಕ್ಷಕ ಜಿ.ಎಸ್.ಸೋಮಪ್ಪ ಮಾತನಾಡಿ, ಧರ್ಮಾಪುರ ಗ್ರಾಮ ಹಾಗೂ ರೈತರ ಜಮೀನುಗಳು ಸಂಡೂರು ಪಟ್ಟಣಕ್ಕೆ ಹೊಂದಿಕೊಂಡಿದ್ದು, ಆದರ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಸುತ್ತಲಿನ ಗಣಿ ಚಟುವಟಿಕೆಯಿಂದ ರೈತರು ಭೂಮಿ ಕಳೆದುಕೊಂಡಿದ್ದಾರೆ. ಈಗ ಉಳಿದುಕೊಂಡ ಭೂಮಿಗಳು ಫಲವತ್ತಾಗಿದ್ದು ಕೆಲವರು ನೀರಾವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಈಗ ಧರ್ಮಾಪುರ ಜಮೀನುಗಳಲ್ಲಿ ರೈಲ್ವೆ ಮತ್ತು ಸ್ಲೈಡಿಂಗ್ ನಿರ್ಮಾಣ ಮಾಡಲು ತಹಸೀಲ್ದಾರ್ ಮೂಲಕ ರೈತರಿಗೆ ನೋಟಿಸ್ ನೀಡಲಾಗಿದೆ. ಯಾವುದೇ ಕಾರಣಕ್ಕೂ ನಾವು ಭೂಮಿ ನೀಡುವುದಿಲ್ಲ. ಕಂದಾಯ ಮತ್ತು ಸರ್ವೇ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸುತ್ತಲೂ ಅರಣ್ಯ ಪ್ರದೇಶವಿದ್ದು ಸಮಗ್ರ ಅರಣ್ಯ ಕೃಷಿ ಮಾಡಿ ರೈತರು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ರೈಲ್ವೆ ಯಾರ್ಡ್, ಸ್ಟಾಕ್‌ಯಾರ್ಡ್ ಮತ್ತು ಸ್ಲೈಡಿಂಗ್‌ಗೆ ಇದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು.