ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ದುಸ್ವಪ್ನವಾಗಿ ಕಾಡುತ್ತಿರುವ ಭೂಸ್ವಾಧೀನ ಗುಮ್ಮ ಇದೀಗ ದೊಡ್ಡಬಳ್ಳಾಪುರಕ್ಕೂ ಕಾಲಿಟ್ಟಿದೆ. ರೈತಾಪಿ ಜನರು ಇದರ ವಿರುದ್ಧ ತೀವ್ರ ಸೆಣಸಾಟಕ್ಕೆ ಸಜ್ಜಾಗುತ್ತಿದ್ದು, ಸರ್ಕಾರ ಹಾಗೂ ರೈತರ ನಡುವಿನ ಕದನಕ್ಕೆ ವೇದಿಕೆ ಸಿದ್ದಗೊಳ್ಳುತ್ತಿದೆ.
ಕರ್ನಾಟಕ ಗೃಹಮಂಡಳಿ ವತಿಯಿಂದ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ದೊಡ್ಡಹೆಜ್ಜಾಗಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ ಮತ್ತು ಕಸಘಟ್ಟ ಗ್ರಾಮಗಳಿಂದ ಸುಮಾರು 2760 ಎಕರೆಯಷ್ಟು ಜಮೀನನ್ನು ಭೂಸ್ವಾಧೀನಪಡಿಸಲಿಕೊಳ್ಳಲು ಸಿದ್ದತೆ ನಡೆಸಿದೆ ಎನ್ನಲಾಗಿದ್ದು, ಈ ಭಾಗದ ರೈತರು ತೀವ್ರ ಆತಂಕ ಎದುರಿಸುವಂತಾಗಿದೆ. ಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳಲು ಯಾರೊಬ್ಬರೂ ತಯಾರಿಲ್ಲದ ಹಿನ್ನೆಲೆಯಲ್ಲಿ ಪಂಚ ಗ್ರಾಮಗಳ ರೈತ ಮುಖಂಡರು ಸರಣಿ ಸಭೆಗಳನ್ನು ನಡೆಸುತ್ತಿದ್ದು ಸರ್ಕಾರದ ಭೂಸ್ವಾಧೀನ ಗುಮ್ಮನ ವಿರುದ್ಧ ಹೋರಾಟ ನಡೆಸಲು ಅಣಿಯಾಗುತ್ತಿದ್ದಾರೆ.
ವಿಕಾಸಸೌಧದಲ್ಲಿ ಸಭೆ:
ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಸ್ವಾಧೀನ ಸಂಬಂಧ ಸೆ.19 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಭೆ ನಡೆಸಲಾಗಿದೆ, ಶೇ.50:50 ಅನುಪಾತದಡಿಯಲ್ಲಿ ಭೂಸ್ವಾಧೀನ ಕಾಯ್ದೆಯಡಿ ಉಪನಗರ (ಟೌನ್‌ಶಿಪ್) ನಿರ್ಮಿಸಲು ಸಂಬಂಧ ಚರ್ಚೆ ನಡೆಸಲಾಗಿದೆ, ವಸತಿ ಇಲಾಖೆ ಅಧಿಕಾರಿಗಳು ಸೇರಿ ಸರ್ಕಾರದ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಸುಧೀರ್ಘ ಚರ್ಚೆ ನಡೆಸಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಇದುವರೆಗೆ ಭೂಸ್ವಾಧೀನ ಸಂಬಂಧ ಗ್ರಾಮದ ಯಾರೊಬ್ಬರಿಗೂ ನೋಟಿಸ್ ನೀಡಿಲ್ಲ, ಆದರೆ ಏಕಾಏಕಿ ಭೂಸ್ವಾಧೀನ ಸಂಬಂಧಪಟ್ಟಂತೆ ದೊಡ್ಡ ಮಟ್ಟದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕುತ್ತಿರುವ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂಬ ಅಚಲ ನಿರ್ಧಾರಕ್ಕೆ ಬಂದಿದ್ದಾರೆ.
ನಾಡಕಚೇರಿಯಲ್ಲಿ ಮನವಿ: ದಸರಾ ಹಬ್ಬದ ಸಂಭ್ರಮದಲ್ಲಿರುವ ರೈತಾಪಿ ಜನರಿಗೆ ಭೂಸ್ವಾಧೀನ ಗುಮ್ಮ ದುಸ್ವಪ್ನವಾಗಿ ಕಾಡುತ್ತಿದ್ದು, ಸೆ.28ರಂದು ಹೋಬಳಿ ವ್ಯಾಪ್ತಿಯ ರೈತ ಮುಖಂಡರು ಸಭೆ ನಡೆಸಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನ ಹೈಡ್ರಾಮವನ್ನು ಕಂಡಿರುವ ಈ ಭಾಗದ ರೈತರು ಯಾವುದೇ ಕಾರಣಕ್ಕೂ ಸರ್ಕಾರದ ಅಡಕತ್ತರಿಗೆ ಸಿಲುಕಬಾರದು ಎಂಬುದಾಗಿ ಸಮಾಲೋಚನೆ ನಡೆಸಿದ್ದಾರೆ. ಇದೇ ವಿಷಯ ಸಂಬಂಧ ಸರ್ಕಾರ ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣದಿಂದಲೇ ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷತೆಯಲ್ಲಿ ಶನಿವಾರ ನಾಡಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಲಾಗಿದೆ.
ಹುಲಿಕುಂಟೆ ಭಾಗದಲ್ಲಿ ಡ್ರೋನ್ ಸರ್ವೆ! ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿನ ಐದು ಗ್ರಾಮಗಳಲ್ಲಿ ಭೂಸ್ವಾಧೀನದ ಆತಂಕದ ಎದುರಾಗಿರುವ ನಡುವೆಯೇ ಹುಲಿಕುಂಟೆ ವ್ಯಾಪ್ತಿಯಲ್ಲಿ ಡ್ರೋನ್ ಮೂಲಕ ಸರ್ವೇ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದ್ದು ಆ ಭಾಗದಲ್ಲಿಯೂ ಸರ್ಕಾರ ರೈತರ ಜಮೀನುಗಳ ಮೇಲೆ ಕಣ್ಣಿಟ್ಟಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ, ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮಗಳ ರೈತರು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದು ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಕದನಕ್ಕೆ ಸಜ್ಜಾಗುತ್ತಿದ್ದಾರೆ.
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ನಮ್ಮ ಕಡೆಯಿಂದ ತೀವ್ರ ವಿರೋಧವಿದೆ. ಈ ಭಾಗದ ಲವತ್ತಾ ಕೃಷಿ ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಈ ಬಗ್ಗೆ ಸರ್ಕಾರಕ್ಕೂ ಈಗಾಗಲೇ ಸ್ಪಷ್ಟ ಸಂದೇಶ ರವಾನಿಸಲಾಗಿದೆ, ಇದರೊಟ್ಟಿಗೆ ಈ ಭಾಗದ ರೈತ ಹೋರಾಟಗಾರರ ಬೆಂಬಲಕ್ಕೆ ನಿಲ್ಲಲಿದ್ದು, ಸರಣಿ ಪ್ರತಿಭಟನೆ, ಸತ್ಯಾಗ್ರಹ ಎಲ್ಲದಕ್ಕೂ ಸಿದ್ದವಿದ್ದೇವೆ.
ಧೀರಜ್‌ಮುನಿರಾಜು, ಶಾಸಕ ದೊಡ್ಡಬಳ್ಳಾಪುರ
--
ಯಾವುದೇ ಪಕ್ಷಬೇಧವಿಲ್ಲದೆ ಎಲ್ಲ ಗ್ರಾಮಗಳ ರೈತರು ಒಗ್ಗಟ್ಟಿನಿಂದ ಸರ್ಕಾರದ ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದೇವೆ. ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷತೆಯಲ್ಲಿ ಹೋರಾಟ ಆರಂಭಿಸಲಾಗಿದೆ, ಮುಂದೇ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹೆಸರಿನಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ಸಿದ್ದತೆ ನಡೆಯುತ್ತಿದೆ, ಯಾವುದೇ ಕಾರಣಕ್ಕೂ ಈಭಾಗದಲ್ಲಿ ಸರ್ಕಾರಕ್ಕೆ ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ.
ರಾಮಕೃಷ್ಣಯ್ಯ, ರೈತ ಮುಖಂಡ ದೊಡ್ಡಬಳ್ಳಾಪುರ