ಕಾರವಾರ: ಅಂಕೋಲಾ ತಾಲೂಕಿನ ನೆಲ್ಲೂರು ಕಂಚಿನಬೈಲ್ ಗ್ರಾಮಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಕೊನೆಗೂ ಜಿಲ್ಲಾಡಳಿತ ಅಽಸೂಚನೆ ಹೊರಡಿಸಿದೆ. ಜೂನ್. 26 ರಂದು ವಿಶೇಷ ಭೂ ಸ್ವಾಧೀನಾಧಿಕಾರಿಗಳು ಈ ಸಂಬಂಧ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ನೆಲ್ಲೂರು ಹಾಗೂ ಕಂಚಿನಬೈಲ್ ಗ್ರಾಮಗಳ 58 ಎಕರೆ 11 ಗುಂಟೆ ಖಾಸಗಿ ಜಾಗವನ್ನು ಭಾರತ ಸರ್ಕಾರದ ಭೂ ಸ್ವಾಧೀನ ಕಾಯ್ದೆ 2013 ರ ಅನ್ವಯ ಹಾಗೂ ಕರ್ನಾಟಕ ಸರ್ಕಾರದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ 2019 ರ ಅನ್ವಯ ಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಪ್ರಕಟವಾದ 60 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಅದರಲ್ಲಿ ಒಟ್ಟು 123 ಸರ್ವೇ ನಂಬರ್‌ಗಳ ಸುಮಾರು 200 ಕ್ಕೂ ಅಽಕ ರೈತರ ಜಮೀನುಗಳು ಸೇರಿವೆ. 34.2 ಎಕರೆ ಮಳೆಯಾಶ್ರಿತ ಬೆಳೆ ಬೆಳೆಯುವ ಗದ್ದೆ, 21.34 ಎಕರೆ ತರಿ, 2.13 ಎಕರೆ ತೋಟ, 1.11 ಎಕರೆ ಬ ಕರಾಬು ಜಮೀನುಗಳ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಸೀಬರ್ಡ್ ನೌಕಾ ಯೋಜನೆಯ ಭಾಗವಾದ ಶಸ್ತ್ರಾಗಾರ ಐಎನ್‌ಎಸ್ ವಜ್ರಕೋಶಕ್ಕಾಗಿ ಹಟ್ಟಿಕೇರಿ ಭಾಗದ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಅದೇ ವ್ಯಾಪ್ತಿಯಲ್ಲಿರುವ ನೆಲ್ಲೂರು ಹಾಗೂ ಕಂಚಿನಬೈಲ್ ಗ್ರಾಮಗಳನ್ನು ಸ್ವಾಧೀನ ಮಾಡದೇ ಬಿಡಲಾಗಿತ್ತು. ಆದರೆ, ನೌಕಾಸೇನೆ ಊರಿನ ಸುತ್ತಲೂ ಬೇಲಿ ಹಾಕಿದ್ದರಿಂದ ಗ್ರಾಮಸ್ಥರ ಓಡಾಟಕ್ಕೆ ಸಮಸ್ಯೆ ಉಂಟಾಗಿತ್ತು. ಇದರಿಂದ ಗ್ರಾಮಸ್ಥರು ಹಲವು ವರ್ಷಗಳಿಂದ ನಮಗೆ ರಸ್ತೆ ಕೊಡಿ ಇಲ್ಲವೇ ನಮ್ಮನ್ನೂ ಸ್ಥಳಾಂತರಿಸಿ ಎಂದು ಮನವಿ ಮಾಡಿಕೊಳ್ಳುತ್ತ ಬಂದಿದ್ದರು. ಹೊಸ ಕಾಯ್ದೆಯಂತೆ ಜಮೀನುಗಳಿಗೆ ಪರಿಹಾರ ಹಾಗೂ ಮಾಲೀಕರಿಗೆ ಪುನರ್ವಸತಿ ಕಲ್ಪಿಸಲು ಅವಕಾಶವಿದೆ. ಅಲ್ಲದೇ ಪುನರ್ವಸತಿಯನ್ನೂ ಮಾಡಿಕೊಡಬೇಕಿದೆ.