ತುಮಕೂರು: ತಾಲೂಕಿನ ಹೆಬ್ಬೂರು ಕೆರೆ ಜಾಗ ಒತ್ತುವರಿ ತೆರವುಗೊಳಿಸುವಂತೆ ಕೋರಿ ಬೆಳಗುಂಬ ಗ್ರಾಪಂ ಮಾಜಿ ಸದಸ್ಯ ಬಿ.ಎಸ್.ವೆಂಕಟೇಶ್ ಅವರು ಡಿಸೆಂಬರ್ 9 , 2019ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದ ದೂರಿಗೆ ಸಿಎಂ ಕಚೇರಿ ಸ್ಪಂದಿಸಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.
ಹೆಬ್ಬೂರು ಸರ್ವೇ ನಂಬರ್ 158ರ ಕೆರೆ ಅಂಗಳದ 3 ಎಕರೆಯನ್ನು ಬಸ್ ನಿಲ್ದಾಣಕ್ಕೆ, ಸ್ತ್ರೀಶಕ್ತಿ ಭವನಕ್ಕೆ 10 ಗುಂಟೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ 3 ಎಕರೆ ನೀಡಲಾಗಿದ್ದು, ಈಗಾಗಲೇ ಎಪಿಎಂಸಿ, ಬಸ್ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ. ಕೆರೆ ಜಾಗ ಒತ್ತುವರಿ ಮಾಡಿ ಅಕ್ಕಪಕ್ಕ ಬಡಾವಣೆ ನಿರ್ಮಿಸಿರುವ ರಿಯಲ್ ಎಸ್ಟೇಟ್ ಕುಳಗಳು ಉಳಿದ 17.05 ಎಕರೆಯಷ್ಟು ಅಂಗಳದ ಮೇಲೂ ಕಣ್ಣು ಹಾಕಿದ್ದಾರೆ.
ಖಾಸಗಿ ವ್ಯಕ್ತಿಗಳು ಕೆರೆಯ ಪಕ್ಕ ಬಡಾವಣೆ ನಿರ್ಮಿಸಲು ಜಾಗ ಒತ್ತುವರಿ ಮಾಡಿಕೊಂಡಿದ್ದು, ಈಗಾಗಲೇ ಬಡಾವಣೆಗೆ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇಂತಹ ಬಡಾವಣೆಗಳಿಗೆ ನಗರ ಯೋಜನಾ ಪ್ರಾಧಿಕಾರದಲ್ಲೂ ಮಂಜೂರಾತಿ ದೊರೆತಿದ್ದು, ಇಲ್ಲೂ ಭ್ರಷ್ಟಾಚಾರ ನಡೆದಿದೆ. ಹಾಗಾಗಿ, ಒತ್ತುವರಿ ತೆರವುಗೊಳಿಸಬೇಕು. ಇದಕ್ಕೆ ಕಾರಣರಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ವೆಂಕಟೇಶ್ ದೂರು ಸಲ್ಲಿಸಿದ್ದರು.
ಇದರ ಅನ್ವಯ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಜಿ.ಎಲ್.ಗಣೇಶ್ ಕುಮಾರ್ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ರವಾನಿಸಿದ್ದು, ದೂರಿನಲ್ಲಿ ನೀಡಿರುವ ಅಂಶಗಳಂತೆ ನಿಯಮಾನುಸಾರ ಪರಿಶೀಲಿಸಿ, ಕೈಗೊಂಡ ಕ್ರಮದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲು ಸೂಚಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.
ಹೆಬ್ಬೂರು ಕೆರೆ ಮೇಲೆ ಭೂಗಳ್ಳರು ಕಣ್ಣು ಹಾಕಿದ್ದು ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಕೆರೆ ಅಂಗಳದಲ್ಲಿ ನಿರ್ಮಿಸಿರುವ ರಸ್ತೆ ತೆರವುಗೊಳಿಸ, ಸಂಕ್ಷಿಸಬೇಕು, ಬಸ್ ನಿಲ್ದಾಣ, ಎಪಿಎಂಸಿಗೆ ಜಾಗ ಕೊಟ್ಟು ಉಳಿದಿರುವ 17.5 ಎಕರೆ ಕೆರೆ ಜಾಗಕ್ಕೆ ಫೆನ್ಸಿಂಗ್ ಹಾಕಬೇಕು. ಬಡಾವಣೆ ನಿರ್ಮಾಣಕ್ಕೆ ಅನುಮತಿ ಕೊಟ್ಟು ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಬೆಳಗುಂಬ ವೆಂಕಟೇಶ್ ಅಧ್ಯಕ್ಷ, ಜೆಡಿಎಸ್ ತಾಲೂಕು ಎಸ್ಸಿ ಘಟಕ ಕೆರೆ ಒತ್ತುವರಿ ಸಂಬಂಧಿಸಿದಂತೆ ಮಾಹಿತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನೊಟೀಸ್ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕೆರೆ ಒತ್ತುವರಿ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡಲಾಗುವುದು. ಜಿ.ವಿ.ಮೋಹನ್ ಕುಮಾರ್ ತಹಸೀಲ್ದಾರ್