ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಎಸ್ಸಿ-ಎಸ್ಟಿ ಸಮುದಾಯದ ಭೂ ರಹಿತ ಕುಟುಂಬಗಳ ಕೃಷಿ ಜಮೀನಿನ ಸರ್ವೇ ನಂಬರ್‌ಗಳನ್ನು ದುರಸ್ತಿ ನೆಪದಲ್ಲಿ ಅದಲು ಬದಲು ಮಾಡಿ ಕ್ರಯ ಮಾಡಿಸಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್‌ಗಳ ಅಕ್ರಮ ದಂಧೆ ಬಾಗೇಪಲ್ಲಿ ತಾಲೂಕಿನಲ್ಲಿ ವ್ಯಾಪಕವಾಗಿದ್ದು, ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.
ತಾಲೂಕು ವ್ಯಾಪ್ತಿಯ ಬಹುತೇಕ ಎಸ್ಸಿ-ಎಸ್ಟಿ ಕುಟುಂಬಗಳು ಕೃಷಿ ಅವಲಂಬಿತರಾಗಿ ಜೀವನ ನಡೆಸುತ್ತಿದ್ದಾರೆ. ಯಾವುದೇ ಅಸರೆ ಇಲ್ಲದ ಹಲವು ಕುಟುಂಬಗಳಿಗೆ ಕೃಷಿ ಭೂಮಿ ಆಸರೆಯಾಗಿದೆ. ದಲಿತರ ಕೃಷಿ ಜಮೀನು ಮಾರಾಟ ಮಾಡಬಾರದೆಂದು ಸರ್ಕಾರ ಕಠಿಣ ಕಾನೂನು ರೂಪಿಸಿದೆ ಮತ್ತು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೂ ಎಲ್ಲ ನಿಯಮಗಳನ್ನು ಕಂದಾಯ ಇಲಾಖೆ ಗಾಳಿಗೆ ತೂರಿದ್ದು, ದಲಿತರ ಜಮೀನುಗಳ ಪರಬಾರೆ ವ್ಯಾಪಕವಾಗಿ ನಡೆಯುತ್ತಿದೆ.
ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶಕ್ಕಾಗಿ ಎಸ್ಸಿ-ಎಸ್ಟಿ ಜನಾಂಗದವರ ಭೂಮಿಯನ್ನು ಮಾರಾಟ ಮಾಡಬಾರದೆಂದು ಸರ್ಕಾರ ಕಾನೂನು ಜಾರಿಗೆ ತಂದಿದೆ. ಆದರೆ ಈ ಸಮುದಾಯದ ಕೆಲ ಮುಖಂಡರೇ ತಮ್ಮ ಸಮುದಾಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ಹಣದ ಆಸೆ ತೋರಿಸಿ ಕಡಿಮೆ ಬೆಲೆಗೆ ಜಮೀನು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ನಂತರ ಎರಡು ಅಥವಾ ಮೂರನೇ ವ್ಯಕ್ತಿಗೆ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದಾರೆ.
ಮೂಲ ಪತ್ತೆ ಕಷ್ಟ: ಕಾನೂನು ಪಾಲನೆ ಮಾಡಬೇಕಾಗಿರುವ ಎಸ್ಸಿ-ಎಸ್ಟಿ ಸಮುದಾಯದ ವ್ಯಕ್ತಿಗಳೇ ದಲಿತರಿಂದ ಜಮೀನನ್ನು ಖರೀದಿ ಮಾಡಿ ದುರಸ್ತಿ ಮಾಡಿಸಿ, ಇದಕ್ಕೆ ಹೊಸ ಸರ್ವೇ ನಂಬರ್ ಪಡೆದು ರಿಯಲ್ ಎಸ್ಟೇಟ್ ಅಥವಾ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಉಪನೊಂದಣಾಧಿಕಾರಿಗಳಿಗೆ ಜಮೀನಿನ ಮೂಲ ಪತ್ತೆ ಹಚ್ಚುವುದೇ ಕಷ್ಟವಾಗುತ್ತಿದೆ.
ಸರ್ವೇ ನಂಬರ್ ಅದಲು ಬದಲು: ರೀಯಲ್ ಎಸ್ಟೇಟ್ ಕುಲಗಳ ಹಣದ ಆಸೆಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ದುರಸ್ತಿ ನೆಪದಲ್ಲಿ ಜಮೀನಿನ ಮೂಲ ಸರ್ವೇ ನಂಬರ್‌ಗಳನ್ನು ಅದಲು ಬದಲು ಮಾಡಿ ಹೊಸ ಸರ್ವೇ ನಂಬರ್ ಮಂಜೂರು ಮಾಡಿಕೊಡುತ್ತಿದ್ದಾರೆ. ಕಂದಾಯ ಇಲಾಖೆಯ ಕರಾಳ ದಂಧೆಯಿಂದ ತಾಲೂಕಿನ ಅನೇಕ ದಲಿತರು ತಮ್ಮ ಜಮೀನು ಕಳೆದುಕೊಂಡು ಭೂ ರಹಿತರ ಪಟ್ಟಿಗೆ ಸೇರುತ್ತಿದ್ದಾರೆ. ಇಂತಹ ದಲಿತರ ಜಮೀನುಗಳ ಅಕ್ರಮ ಪರಬಾರೆ ದಂಧೆಗೆ ಕಡಿವಾಣ ಹಾಕಲು ಜಿಲ್ಲಾ ಹಾಗೂ ತಾಲೂಕು ಆಡಳಿತ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂಬುದು ದಲಿತ ಹೋರಾಟಗಾರರ ಧ್ವನಿಯಾಗಿದೆ.
ಬಾಗೇಪಲ್ಲಿ ತಾಲೂಕಿನ ಎಸ್ಸಿ-ಎಸ್ಟಿ ವರ್ಗದವರ ಭೂಮಿಯನ್ನು ಮೋಸದಿಂದ ಖರೀದಿಸಿ ದುರಸ್ತಿ ಪ್ರಕ್ರಿಯೆ ಮೂಲಕ ಹೊಸ ಸರ್ವೇ ನಂಬರ್ ಸೃಷ್ಟಿಸಿ ಇತರರಿಗೆ ಮಾರಾಟ ಮಾಡುತ್ತಿದ್ದಾರೆ. ದಲಿತರಿಗೆ ನೀಡಿರುವ ಜಮೀನನ್ನು ಯಾರಿಗೂ ಮಾರಾಟ ಮಾಡಬಾರದು ಎಂದು ಸುಪ್ರಿಂ ಕೋರ್ಟ್ ಆದೇಶವಿದ್ದರೂ ಸಬ್ ರಿಜಿಸ್ರ್ಟಾರ್ ಕಚೇರಿಯಲ್ಲಿ ದಲಿತರ ಜಮೀನಿನ ಪರಬಾರೆ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳ ಮತ್ತು ಮುಖಂಡರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬಿ.ವಿ.ವೆಂಕಟರಮಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಾಗೇಪಲ್ಲಿ ಎಸ್ಸಿ-ಎಸ್ಟಿ ಜನಾಂಗದವರು ಭೂರಹಿತರಾಗಬಾರದೆಂದು ಸರ್ಕಾರ ಜಮೀನು ಮಂಜೂರು ಮಾಡುತ್ತಿದೆ. ಕೆಲವರು ಇವರ ಭೂಮಿಯನ್ನು ಜಿಪಿಎ ಕ್ರಯ ಮಾಡಿಸಿಕೊಂಡು ದುರಸ್ತಿ ಮೂಲಕ ಹೊಸ ಸರ್ವೇ ನಂಬರ್ ಮಾಡಿಸಿ ಇತರರಿಗೆ ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬರುತ್ತಿವೆ. ದುರಸ್ತಿಗೊಂಡ ಸರ್ವೇ ನಂಬರ್ ಪತ್ತೆಹಚ್ಚಿ ರದ್ದುಗೊಳಿಸಿ ಸರ್ಕಾರಕ್ಕೆ ವಾಪಸ್ ಪಡೆದುಕೊಳ್ಳುವ ಪ್ರಕ್ರಿಯೆ ಕಂದಾಯ ಇಲಾಖೆ ಮಟ್ಟದಲ್ಲಿ ನಡೆಯುತ್ತಿದೆ. ಭೂಮಿ ತಂತ್ರಾಂಶದಲ್ಲಿ ಸರ್ವೇ ನಂಬರ್‌ಗಳ ಜೋಡಣೆ ಕಾರ್ಯಕ್ರಮ ನಡೆಯುತ್ತಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಲಿದ್ದೇವೆ. ವೈ.ರವಿ.ತಹಸೀಲ್ದಾರ್ ಬಾಗೇಪಲ್ಲಿ