ಜಿಲ್ಲೆ

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ : ಸಸ್ಯಕಾಶಿಗೆ ಒಂದೇ ದಿನ 2.10 ಲಕ್ಷ ಮಂದಿ ದಾಂಗುಡಿ!

ಪಂಕಜ ಕೆ.ಎಂ.

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್ಬಾಗ್‌ನಲ್ಲಿ ಆಯೋಜಿಸಿರುವ 216ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ 2.10 ಲಕ್ಷಕ್ಕೂ ಅಧಿಕ ವೀಕ್ಷಕರು ಭೇಟಿ ನೀಡಿದ್ದರು. ಡಾ. ಅಂಬೇಡ್ಕರ್ ಜೀವನ- ಸಾಧನೆ ಕುರಿತಾದ ಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಜನರು ಆಗಮಿಸಿದ್ದರು.

ರಜೆ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದಲೇ ಉದ್ಯಾನದ ಸುತ್ತಲೂ ದಟ್ಟಣೆ ಉಂಟಾಯಿತು. ಜನರು ಗುಂಪುಗುಂಪಾಗಿ ಕುಟುಮಬ ಸಮೇತ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದರು. ಸ್ವಾತಂತ್ರ್ಯೋತ್ಸವ ಆಚರಣೆ ಬಳಿಕ ಶಾಲಾ- ಕಾಲೇಜು ವಿದ್ಯಾರ್ಥಿಗಳು ತಂಡೋಪತಂಡವಾಗಿ ಭೇಟಿ ನೀಡಿದರು. ಸಂಜೆಯಾಗುತ್ತಲೇ ಜನರ ಆಗಮನ ಮತ್ತಷ್ಟು ಹೆಚ್ಚಿತು. ನಾಲ್ಕೂ ಪ್ರವೇಶ ದ್ವಾರಗಳಲ್ಲೂ ನೂಕುನುಗ್ಗಲು ಉಂಟಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು.

ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆ ತಪ್ಪಿಸಲೆಂದೇ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಸಹ ಮಾಡಲಾಗಿತ್ತು. ಅದರ ಹೊರತಾಗಿಯೂ ಜನರು ಸರತಿಯಲ್ಲಿ ನಿಂತು ಟಿಕೆಟ್ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಲಾಲ್ಬಾಗ್ ಮುಖ್ಯ ಗೇಟಿನ ರಸ್ತೆಯಲ್ಲಿ ಸಂಚಾರದಟ್ಟಣೆ ನಿಯಂತ್ರಿಸುವ ಸಲುವಾಗಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಆ ಮಾರ್ಗದ ರಸ್ತೆಗಳಲ್ಲಿ ಟ್ರಾಫಿಕ್ ಕಂಡುಬಂತು.

ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸಿದ್ದರಿಂದ ಪ್ರದರ್ಶನ ಕೇಂದ್ರ ಸ್ಥಳ ಗಾಜಿನ ಮನೆಯಲ್ಲಿ ಜನರು ಗಿಜಿಗುಟ್ಟಿದರು. ಹೂಗಳಲ್ಲಿ ಅರಳಿದ್ದ ಸಂಸತ್ ಭವನ ಸೇರಿ ಇತರೆ ಹೂವಿನ ಮಾದರಿಗಳು ಹಾಗೂ ಅಂಬೇಡ್ಕರ್ ಪ್ರತಿಮೆ ಬಳಿ ಸೆಲ್ಫಿಗೆ ಜನರು ಮುಗಿಬಿದ್ದರು. ಇದಲ್ಲದೆ ಬಂಡೆ, ಕೆರೆ ಏರಿ ಮೇಲೆ, ಬೋನ್ಸಾಯ್ ಗಾರ್ಡನ್, ತರಕಾರಿ ಗಾರ್ಡನ್, ಮಾರಾಟ ಮಳಿಗೆಗಳ ಬಳಿ ಹೆಚ್ಚಿನ ಜನಸಂದಣಿಯಿತ್ತು.

2.10 ಲಕ್ಷ ಮಂದಿ ಭೇಟಿ: ಫಲಪುಷ್ಪ ಪ್ರದರ್ಶನದಲ್ಲಿ ಗುರುವಾರ 92.35 ಲಕ್ಷ ರೂ. ಸಂಗ್ರಹವಾಗಿದೆ. ಒಟ್ಟಾರೆ ಈವರೆಗೂ 5.50 ಲಕ್ಷಕ್ಕೂ ಅಧಿಕ ಮಂದಿ ಪ್ರದರ್ಶನ ವೀಕ್ಷಿಸಿದ್ದಾರೆ. 2.12 ಕೋಟಿ ರೂ. ಹಣ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

19ರವರೆಗೆ ಪ್ರದರ್ಶನ: 19ರವರೆಗೆ ಪ್ರದರ್ಶನ ಮುಂದುವರಿಯಲಿದ್ದು, ಶನಿವಾರ ಮತ್ತು ಭಾನುವಾರ ರಜಾ ದಿನ ಆಗಿರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.