ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಲಾಲ್ಬಾಗ್ ನಲ್ಲಿ ಆಯೋಜಿಸಿದ್ದ 214ನೇ ಫಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ತೆರೆಬಿದ್ದಿತ್ತು. ಕೊನೆಯ ದಿನದಂದು ದಾಖಲೆಯ ಸಂಖ್ಯೆಯಲ್ಲಿ 2.45 ಲಕ್ಷಕ್ಕೂ ಅಧಿಕ ಮಂದಿ ಪ್ರದರ್ಶನ ವೀಕ್ಷಿಸಿದರು. ಇದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಲಾಲ್‌ಬಾಗ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ದಿಂದಾಗಿ ನಗರದ ಮೂಲೆ ಮೂಲೆಗಳಿಂದ ಮಹಿಳೆಯರು ತಂಡೋಪ ತಂಡವಾಗಿ ಲಾಲ್‌ಬಾಗ್‌ಗೆ ಆಗಮಿಸಿದ್ದರು. ಇದರಿಂದಾಗಿ ನಾಲ್ಕೂ ಪ್ರವೇಶ ದ್ವಾರಗಳಲ್ಲೂ ಜನರು ಕಿಕ್ಕಿರಿದು ತುಂಬಿದ್ದರು. ಕೌಂಟರ್‌ಗಳಲ್ಲಿ ಟಿಕೆಟ್ ವಿತರಿಸಲು ಸಿಬ್ಬಂದಿ ಪರದಾಡಿದರು. ಈ ವೇಳೆ ತಳ್ಳಾಟ ನೂಕಾಟ ಹೆಚ್ಚಾಗಿ ಟಿಕೆಟ್ ಪಡೆಯದೇ ಪ್ರದರ್ಶನ ವೀಕ್ಷಿಸಿದವರ ಸಂಖ್ಯೆಯೇ ಹೆಚ್ಚಿತ್ತು. ಆದಾಗಿಯೂ ಒಂದೇ ದಿನ 81. 50 ಲಕ್ಷ ಸಂಗ್ರಹಣೆಯಾಗಿದೆ.
ನಿರೀಕ್ಷೆಗೂ ಮೀರಿದ ಜನ: ಈ ಬಾರಿ ಪ್ರದರ್ಶನದಲ್ಲಿ ಶಕ್ತಿಕೇಂದ್ರ ವಿಧಾನ ಸೌಧ,ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಕರ್ನಾಟಕ ಭೂಪಟ ಹೂಗಳಲ್ಲಿ ಅನಾವರಣಗೊಂಡಿದ್ದವು. ಜೊತೆಗೆ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ನವರು ಜೀವನ, ಸಾಧನೆ ಹಾಗೂ ಸ್ವಾ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರ ಸಚಿವರಾಗಿ ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ಪರಿಚಯಿಸಲಾಗಿತ್ತು. ಹೀಗಾಗಿ ಪ್ರದರ್ಶನ ವಿಶೇಷ ಮಹತ್ವ ಪಡೆದುಕೊಂಡಿತ್ತು.
ಎಲ್ಲಲ್ಲೂ ಜನಸಾಗರ: ಪ್ರದರ್ಶನದಲ್ಲಿ ಎತ್ತ ನೋಡಿದರೂ ಜನಸಾಗರ. ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲಿ ಮಾತ್ರವಲ್ಲದೆ, ಗಾಜಿನ ಮನೆ, ಬಂಡೆ, ಕೆರೆ ದಂಡೆ, ನರ್ಸರಿ ಸೇರಿ ಲಾಲ್‌ಬಾಗ್ ಸಂಪೂರ್ಣ ಜನರಿಂದ ತುಂಬಿತ್ತು. ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಮಕ್ಕಳ ಸಂಖ್ಯೆ ಅಧಿಕವಾಗಿತ್ತು. 40 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದರು. ಗಾಜಿನಮನೆಯಲ್ಲಿ ಗುಲಾಬಿಗಳಲ್ಲಿ ಸಿದ್ಧಗೊಂಡಿದ್ದ ವಿಧಾನಸೌಧ, ಶಿವಪುರಧ್ವಜ ಸತ್ಯಾಗ್ರಹ ಸೌಧ ಹಾಗೂ ಕೆಂಗಲ್ ಹನುಮಂತಯ್ಯನವರ 14 ಅಡಿ ಎತ್ತದ ಬೃಹತ್ ಪ್ರತಿಮೆ ಕಂಡು ಪುಳಕಿತಗೊಂಡರು.
ಸಂಚಾರ ದಟ್ಟಣೆ: ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಇದ್ದಿದ್ದರಿಂದ ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನ ವೀಕ್ಷಿಸಿದರು. ಜನದಟ್ಟಣೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಲಾಲ್ ಬಾಗ್ ಸುತ್ತಮುತ್ತ ಹಾಪ್‌ಕಾಮ್ಸ ಮಳಿಗೆ, ಸಿದ್ದಾಪುರ ಗೇಟ್ ಬಳಿ ರಸ್ತೆ, ಮಾವಳ್ಳಿ ರಸ್ತೆ, ಜಯನಗರ ಭಾಗದ ಆರ್.ವಿ. ರಸ್ತೆಗಳಲ್ಲೂ ವಾಹನದಟ್ಟಣೆ ಉಂಟಾಗಿತ್ತು.
8 ಲಕ್ಷಕ್ಕೂ ಅಧಿಕ ಮಂದಿ ಭೇಟಿ: ಹನ್ನೆರಡು ದಿನಗಳ ಕಾಲ ನಡೆದ ಲಪುಷ್ಪ ಪ್ರದರ್ಶನವನ್ನು ಒಟ್ಟು 8.26 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಒಟ್ಟಾರೆ 3.98 ಕೋಟಿ ರೂ. (2,98,30,000) ದಾಖಲೆಯ ಹಣ ಸಂಗ್ರಹಣೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.