ಬೆಂಗಳೂರು: ಸ್ವಾತಂತ್ರ್ಯೋತ್ಸವ 216ನೇ ಫಲಪುಷ್ಪ ಪ್ರದರ್ಶನದ ಮೊದಲ ದಿನ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಲಾಲ್‌ಬಾಗ್‌ಗೆ ಭೇಟಿ ನೀಡಿದ ವೀಕ್ಷಕರು ಹೂಗಳಲ್ಲಿ ಅರಳಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಸಾಧನೆ ಹಾಗೂ ವಿಚಾರಧಾರೆಗಳನ್ನು ಕಣ್ತುಂಬಿಕೊಂಡರು.
ಗಾಜಿನ ಮನೆಯ ಒಳಾಂಗಣದಲ್ಲಿ ಬಣ್ಣ ಬಣ್ಣದ ಹೂಗಳಿಂದ ರಚನೆಯಾಗಿದ್ದ ಸಂಸತ್ ಭವನ, 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ, ಮಧ್ಯಪ್ರದೇಶದ ಮಹೌನಲ್ಲಿರುವ ಅಂಬೇಡ್ಕರರ ಜನ್ಮಸ್ಥಳ ಪರಿಚಯಿಸುವ ಸ್ಮಾರಕ ಹಾಗೂ ಮುಂಬೈನ ದಾದರ್‌ನಲ್ಲಿರುವ ಚೈತನ್ಯಭೂಮಿಯ ಪುಷ್ಪಮಾದರಿ ಸೇರಿ ಅವರ ಹೋರಾಟ ಸೇರಿ ಬದುಕಿನ ಪ್ರಮುಖ ಘಟ್ಟಗಳು, ದೇಶಕ್ಕೆ ನೀಡಿದ ಕೊಡುಗೆಯನ್ನು ಪರಿಚಯ ಮಾಡಿಕೊಂಡರು.
ಇನ್ನು ಗಾಜಿನ ಮನೆಯ ಹೊರಾಂಗಣದಲ್ಲಿ ಅಳವಡಿಸಿದ್ದ ಎಲ್‌ಇಡಿ ಸ್ಕ್ರೀನ್‌ಗಳ ಮುಂದೆ ನಿಂತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ದರ್ಶನಕ್ಕೆ ಪೂರಕವಾದ ಸಚಿತ್ರ ಮಾಹಿತಿಯ ಪ್ರದರ್ಶನ ವೀಕ್ಷಿಸಿದರು. ಹಾಗೇಯ ‘ಭೀಮ ಸಂದೇಶ’ ಶೀರ್ಷಿಕೆಯಡಿ ಅಂಬೇಡ್ಕರ್ ಕುರಿತಾದ ಕನ್ನಡ ಕವಿತೆಗಳು ಹಾಗೂ ಅವರ ಆಯ್ದ 120ಕ್ಕೂ ಹೆಚ್ಚು ಸೂಕ್ತಿಗಳನ್ನು ಅಳವಡಿಸಿದ್ದ ಲಗಳನ್ನು ಓದಿ ತಿಳಿಯುವ ಪ್ರಯತ್ನ ಮಾಡಿದರು.
ಪ್ರಬಂಧ ಸ್ಪರ್ಧೆ: ಲಪುಷ್ಪ ಪ್ರದರ್ಶನದ ಅಂಗವಾಗಿ ನಗರದ ಪ್ರೌಢಶಾಲಾ ಮಕ್ಕಳಿಗೆ (7,8 ಮತ್ತು 9ನೇ ತರಗತಿ)ಲಾಲ್‌ಬಾಗ್‌ನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ‘ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ-ಸಾಧನೆ ವಿಷಯವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಬಂಧ ರಚಿಸಿದರು.
ಸೆಲ್ಫೀ ಪಾಯಿಂಟ್‌ಗಳು: ಲಾಲ್ ಬಾಗ್‌ನ ಆಯ್ದೆ 8 ಸ್ಥಳಗಳಲ್ಲಿ ಸೆಲ್ಫೀ ಪಾಯಿಂಟ್‌ಗಳನ್ನು ಅನಾವರಣಗೊಳಿಸಲಾಗಿದ್ದು, ಗಾಜಿನ ಮನೆ, ಕೆರೆ ಏರಿ, ಬೋನ್ಸಾಯ್ ಗಾರ್ಡನ್, ಬಂಡೆ ಪ್ರದೇಶ, ಟೊಪ್ಪಿಯರಿ ಗಾರ್ಡನ್ ಸೇರಿ ಉದ್ಯಾನದಾದ್ಯಂತ ವಿಹರಿಸಿದ ವಿದ್ಯಾರ್ಥಿಗಳು ಹಾಗೂ ವೀಕ್ಷಕರು ಮೊಬೈಲ್‌ಗಳಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ: ಸಮವಸ್ತ್ರ ಧರಿಸಿ ಬರುವ ಒಂದರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ (ರಜಾ ದಿನಗಳನ್ನು ಹೊರತುಪಡಿಸಿ) ಉಚಿತ ಪ್ರವೇಶ ನೀಡಲಾಗುವುದು. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ. ರಜಾ ದಿನಗಳಲ್ಲಿ 100 ರೂ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲೂ 30 ರೂ. ಪ್ರವೇಶ ಶುಲ್ಕವಿದೆ. ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಇಕೆಬಾನ ಪ್ರದರ್ಶನ (ಆ.10):
ಪ್ರದರ್ಶನದ ಜೊತೆಗೆ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಗಳ ಪ್ರದರ್ಶನವನ್ನು ಶನಿವಾರ (ಆ.10) ಮಧ್ಯಾಹ್ನ 1 ಗಂಟೆಗೆ ನಟಿ ಸುಧಾರಾಣಿ ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ. ದು. ಸರಸ್ವತಿ ಇತರರು ಪಾಲ್ಗೊಳ್ಳಲಿದ್ದಾರೆ.