ಜಿಲ್ಲೆ

ಲಲಾಟಮೂರ್ತಿ ಹುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಲಲಾಟಮೂರ್ತಿ ಹಾಗೂ ಇತರ ನಾಲ್ವರು ಸದಸ್ಯರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಶಾಸಕ ಪ್ರೀತಂ ಜೆ.ಗೌಡ ನೂತನ ಅಧ್ಯಕ್ಷ ಹಾಗೂ ಸದಸ್ಯರಿಗೆ ಶಾಲು, ಹಾರ ಹಾಕಿ ಅಭಿನಂದಿಸಿದರು. ನಂತರ ಎಲ್ಲರೂ ನೋಂದಣಿ ಪುಸ್ತಕಕ್ಕೆ ಸಹಿ ಹಾಕುವ ಮೂಲಕ ಪದಗ್ರಹಣ ಮಾಡಿದರು. ಸದಸ್ಯರಾಗಿ ಡಿ.ಆರ್.ಅಶೋಕ್, ಡಿ.ಕೆ.ಶರತ್, ಸುಶೀಲಾ ಅಣ್ಣಪ್ಪ, ಎಚ್.ಒ. ಕೃಷ್ಣಕುಮಾರ್ ಅಧಿಕಾರ ವಹಿಸಿಕೊಂಡರು. ಮತ್ತೊಬ್ಬ ಸದಸ್ಯ ಯಶವಂತ್ ಕ್ವಾರಂಟೈನ್‌ನಲ್ಲಿ ಇರುವುದರಿಂದ ಮುಂದಿನ ತಿಂಗಳು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಶಾಸಕ ಪ್ರೀತಂ ಜೆ.ಗೌಡರ ಆಪ್ತ ಕಾರ್ಯದರ್ಶಿ ಶಿವು ತಿಳಿಸಿದರು.

ಎಲ್ಲರ ವಿಶ್ವಾಸ ಪಡೆಯುವೆ: ಅನಿರೀಕ್ಷಿತವಾಗಿ ಒಲಿದು ಬಂದಿರುವ ಹುಡಾ ಅಧ್ಯಕ್ಷ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ಲಲಾಟಮೂರ್ತಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಹುಡಾ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಬಿಜೆಪಿಯ ಕೆಲ ಹಿರಿಯ ಕಾರ್ಯಕರ್ತರಿಗೆ ಅಸಮಾಧಾನವಾಗಿರಬಹುದು. ಅವರನ್ನೆಲ್ಲ ವೈಯಕ್ತಿವಾಗಿ ಸಂಪರ್ಕಿಸಿ ಸಹಕಾರ ಕೋರುತ್ತೇನೆ. ಒಳ್ಳೆಯ ಕೆಲಸಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ನನಗೆ ವಿಧಾನಸಭೆ ಟಿಕೆಟ್ ಘೋಷಣೆಯಾದಾಗಲೂ ವಿರೋಧ ವ್ಯಕ್ತವಾಗಿತ್ತು. ಯಾವುದೇ ಹುದ್ದೆಯಾದರೂ ಆಕಾಂಕ್ಷಿಗಳು ಹೆಚ್ಚುವುದು ಸಹಜ. ಈಗ ಅಪಸ್ವರ ಎತ್ತಿರುವ ನಾಯಕರ ಪೈಕಿ ಒಬ್ಬರಿಗೆ ಹುಡಾ ಅಧ್ಯಕ್ಷ ಸ್ಥಾನ ನೀಡಿದ್ದರೂ ಉಳಿದವರು ಬೇಸರ ವ್ಯಕ್ತಪಡಿಸುತ್ತಿದ್ದರು. ಹಾಸನ ತಾಲೂಕಿಗೆ ಮಾತ್ರ ಸೀಮಿತವಾಗಿರುವ ಹುದ್ದೆ ಇದಾಗಿದ್ದು ನಗರ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರು ನೂರಾರು ಬಾರಿ ಯೋಚಿಸಿ ಹೆಸರು ಪ್ರಕಟಿಸಿದ್ದರು ಎಂದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದ ಯಾವುದೇ ಪ್ರಚಾರವಿಲ್ಲದ ಕಾರ್ಯಕರ್ತರಿಗೆ ಮನ್ನಣೆ ನೀಡುತ್ತದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆ ವಿಚಾರದಲ್ಲೂ ಬಿಜೆಪಿ ಪಕ್ಷ ಸಂಘಟನೆಗೆ ಆದ್ಯತೆ ನೀಡಿದೆ ಎಂದರು.

ಈಗ ಅಸಮಾಧಾನಗೊಂಡಿರುವ ನಾಯಕರ ಜತೆ ಮಾತನಾಡುತ್ತೇನೆ. ಬಿಜೆಪಿ ಯಾರಿಗೂ ಯಾವತ್ತಿಗೂ ಮೋಸ ಮಾಡಿಲ್ಲ. 2013ರಿಂದ ಪಕ್ಷದಲ್ಲಿ ಗುರುತಿಸಿಕೊಂಡ ನಾನು ಶಾಸಕನಾಗಿ ಗೆಲುವು ಪಡೆದಿದ್ದೇನೆ. ಈ ರೀತಿಯ ಅವಕಾಶ ಎಲ್ಲರಿಗೂ ಸಿಗುತ್ತದೆ. ಆದ್ದರಿಂದ ಯಾರೂ ವಿಚಲಿತರಾಗಬೇಕಿಲ್ಲ ಎಂದು ಹೇಳಿದರು.