ಹುಬ್ಬಳ್ಳಿ: ಹಳೇಹುಬ್ಬಳ್ಳಿ ಅರವಿಂದ ನಗರದದಲ್ಲಿ ಪುರಾತನ ಶ್ರೀ ಲಕ್ಷ್ಮಿ ಸಮೇತ ವೆಂಕಟೇಶ್ವರ ದೇವರ ದೇಗುಲ ಇದ್ದು, ಇದೀಗ ನವೀಕರಣಗೊಳಿಸಿ ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತಿದೆ.
ಇದರ ಜತೆಗೆ ವಿಶೇಷವಾಗಿ ಭೂವರಾಹಸ್ವಾಮಿ ಹಾಗೂ ಆಂಜನೇಯ, ನವಗ್ರಹ ದೇವಸ್ಥಾನವೂ ಇಲ್ಲಿದ್ದು, ಒಂದೇ ಕಡೆ ಎಲ್ಲ ದೇವರ ದರ್ಶನ ಭಾಗ್ಯ ಲಭ್ಯವಾಗುತ್ತಿದೆ.
ಭೂವರಾಹ ಸ್ವಾಮಿ ದೇವಸ್ಥಾನ ಮೈಸೂರು ಬಿಟ್ಟರೆ ಮತ್ತೆ ಹುಬ್ಬಳ್ಳಿಯಲ್ಲಿಯೇ ಭಕ್ತರಿಗೆ ಸಿಗಲಿದೆ. ತಿರುಪತಿಗೆ ಹೋದರೆ ಭಕ್ತರು ಮೊದಲು ದರ್ಶನ ಮಾಡುವುದು ಭೂವರಾಹಸ್ವಾಮಿಯನ್ನು. ಅದೇ ರೀತಿ ಇಲ್ಲಿಯೂ ವ್ಯವಸ್ಥೆ ಮಾಡಲಾಗಿದೆ.
ವೆಂಕಟೇಶ್ವರನಿಗಿಂತ ಮೊದಲು ತನ್ನ ದರ್ಶನ ಪಡೆಯಬೇಕೆಂದು ಭೂವರಾಹಸ್ವಾಮಿಯು ವರ ಪಡೆದಿದ್ದಾನೆ ಎಂಬ ಪ್ರತಿತಿ ಇದೆ. ಹಾಗಾಗಿ ಭಕ್ತರು ಮೊದಲು ಆತನ ದರ್ಶನ ಪಡೆಯುತ್ತಾರೆ.
ಹುಬ್ಬಳ್ಳಿಯಲ್ಲಿ 10ಕ್ಕೂ ಹೆಚ್ಚು ವೆಂಕಟೇಶ್ವರ ದೇವಸ್ಥಾನ ಇವೆ. ಆದರೆ, ಮಹಾಲಕ್ಷ್ಮಿ ಸಮೇತ ವೆಂಕಟೇಶ್ವರ ದೇವರು ಇರುವುದು ಅರವಿಂದನಗರದಲ್ಲಿ ಮಾತ್ರ. ಸುಮಾರು 50 ವರ್ಷ ಹಳೆಯದಾದ ಈ ದೇವಾಲಯವನ್ನು ನವೀಕರಿಸಲಾಗಿದೆ. ಮೂರ್ತಿಗಳನ್ನು ಮರು ಪ್ರತಿಷ್ಠಾಪಿಸಲಾಗಿದೆ.
ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.
ಇದೀಗ ಸೆ. 9ರಂದು ಶ್ರೀ ಲಕ್ಷ್ಮಿ ವೆಂಕಟೇಶ್ವರ ಪದ್ಮಾವತಿ ಮೂರ್ತಿಗಳ ಪಲ್ಲಕ್ಕಿ ಉತ್ಸವ ಜರುಗಲಿದೆ. ಕೊಂಚೂರು ಸವಿತಾ ಪೀಠ ಮಹಾಸಂಸ್ಥಾನದ ಶ್ರೀ ಸವಿತಾನಂದನಾಥ ಸ್ವಾಮೀಜಿ ದೇವಸ್ಥಾನ ಉದ್ಘಾಟನೆ ನೆರವೇರಿಸುವರು. ಪ್ರವಚನ ಕೂಡ ಇರಲಿದೆ.
ದಾವಣಗೆರೆ ವಾದ್ಯ ಕಲಾವಿದರು ವಾದ್ಯಮೇಳ ನಡೆಸುವರು. ಸಾವಿರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಕರ್ನಾಟಕ ರಾಜ್ಯ ಸವಿತಾ ಸಮಾಜ ಅಧ್ಯಕ್ಷ ಎನ್. ಸಂಪತ್ ಕುಮಾರ ಕೆ., ಉಪಾಧ್ಯಕ್ಷ ರಮೇಶ ಶಾಬಾದ, ಧಾರವಾಡ ಜಿಲ್ಲಾ ಸವಿತಾ ಸಮಾಜದ ಕೃಷ್ಣಾ ಉಪ್ಪೇರ, ಹುಬ್ಬಳ್ಳಿ ಸಮಾಜದ ಅಧ್ಯಕ್ಷ ರುನಾಥ ನಾರಾಯಣದಾಸ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.