ಹುಬ್ಬಳ್ಳಿ: ಕಗ್ಗಂಟಾಗಿದ್ದ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪಾಲಿಕೆಯ ಒಟ್ಟು 25 ವಾರ್ಡ್ಗಳ ಪೈಕಿ 22ರಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ವರ ಮಹಾಲಕ್ಷ್ಮಿ ಪೂಜೆಯ ದಿನವಾದ ಶುಕ್ರವಾರ ‘ಲಕ್ಷ್ಮೀ ಕಟಾಕ್ಷ’ ಪ್ರಾಪ್ತವಾಯಿತು.
ಈ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಹೊತ್ತುಕೊಂಡಿರುವ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದರು. ಈ ಸಭೆಗೆ ಹೀಗೆ ಬಂದು ಹಾಗೆ ಹೋದ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಕೈ ಮೇಲಾಗುವಂತೆ ನೋಡಿಕೊಂಡರು. ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ಹೆಬ್ಬಾಳ್ಕರ್ ಅವರ ಅಳಿಯ ಆಗಿರುವುದು ಇಲ್ಲಿ ವಿಶೇಷತೆ ಪಡೆದುಕೊಂಡಿದೆ.
2023ರ ವಿಧಾನಸಭೆ ಚುನಾವಣೆಗೆ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ರಜತ ಸೂಚಿಸಿದ ಹೆಸರನ್ನೇ ಬಹುತೇಕ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸೆಂಟ್ರಲ್ ಕ್ಷೇತ್ರದ 22 ವಾರ್ಡ್ಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಲಕ್ಷ್ಮೀ ಅವರ ಹಿಡಿತದಲ್ಲಿ ಫೈನಲ್ ಆದಂತಾಗಿದೆ. ಈ ಕ್ಷೇತ್ರದ ಮೂರು ವಾರ್ಡ್ಗಳ (ಸಂಖ್ಯೆ 50, 52 ಹಾಗೂ 56) ಅಭ್ಯರ್ಥಿಗಳ ಆಯ್ಕೆಯನ್ನು ಕೆಪಿಸಿಸಿಗೆ ಬಿಡಲಾಗಿದೆ. ಇದರ ಜತೆ ವಾರ್ಡ್ ಸಂಖ್ಯೆ 29 ಹಾಗೂ 71ರ ಅಭ್ಯರ್ಥಿಗಳ ಆಯ್ಕೆಯ ಕುರಿತು ಕೆಪಿಸಿಸಿ ನಿರ್ಧರಿಸಲಿದೆ.
ಹು-ಧಾ ಮಹಾನಗರ ಪಾಲಿಕೆಯ ಒಟ್ಟು 82 ವಾರ್ಡ್ಗಳ ಅಭ್ಯರ್ಥಿಗಳ ಪಟ್ಟಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅಂತಿಮ ಮುದ್ರೆ ಒತ್ತಬೇಕಿದೆ. ಶನಿವಾರ ಮಧ್ಯಾಹ್ನ ಪಟ್ಟಿ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ರಾಜೀನಾಮೆ: 52ನೇ ವಾರ್ಡ್ನಿಂದ ಸ್ಪರ್ಧಿಸಲು ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಹೇಳಿದ್ದಾರೆ. ಮರು ವಿಂಗಡಣೆ ಬಳಿಕ ನನ್ನ ಹಳೇ ವಾರ್ಡ್ (ನಂ. 40) ಮೂರು ವಾರ್ಡ್ಗಳಲ್ಲಿ (ನಂ. 51, 52, 53) ಹಂಚಿ ಹೋಗಿದೆ. ನಾನು 52ನೇ ವಾರ್ಡ್ನಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದೆ. ಆದರೆ, ಗುರುವಾರ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರು ಕರೆ ಮಾಡಿ, ‘ನೀನು ಸ್ಪರ್ಧೆಯಿಂದ ಹಿಂದೆ ಸರಿ. ನನ್ನ ಮಗನಿಗೆ ವಾರ್ಡ್ ಬಿಟ್ಟು ಕೊಡು’ ಎಂದು ಹೇಳಿದ್ದಾರೆ. ವಾರ್ಡ್ ನಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದ್ದಾರೆ. ಟಿಕೆಟ್ ಫೈನಲ್ ಆಗುವವರೆಗೂ ಕಾದು ನೋಡು ಎಂದು ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ ಹೇಳಿದ್ದಾರೆ. ಟಿಕೆಟ್ ನೀಡದಿದ್ದರೆ ರಾಜೀನಾಮೆ ನೀಡುವುದು ಖಚಿತ. ಜಿಲ್ಲಾ ಅಧ್ಯಕ್ಷರು ಪಕ್ಷ ಬೆಳೆಸುವ ಕೆಲಸ ಮಾಡಬೇಕು. ಅದು ಬಿಟ್ಟು ಸ್ವಾರ್ಥಕ್ಕಾಗಿ ಪಕ್ಷದ ಹಿತವನ್ನು ಬಲಿ ಕೊಡುವ ಕೆಲಸ ಮಾಡಬಾರದು ಎಂದಿದ್ದಾರೆ.
ಕುಂದಾನಗರಿಗೆ ಸ್ಥಳಾಂತರ: ಪೂರ್ವ ನಿರ್ಧಾರದಂತೆ ಕೈ ಪಾಳಯದ ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುಕ್ರವಾರ ಬೆಳಗ್ಗೆಯಿಂದ ಹುಬ್ಬಳ್ಳಿಯಲ್ಲಿ ನಡೆಯಬೇಕಿತ್ತು. ಗುರುವಾರ ಹುಬ್ಬಳ್ಳಿಯಲ್ಲಿ ನಡೆದ ಸಭೆಯ ಕೊನೆಯಲ್ಲಿ ಗೌಜು ಗದ್ದಲ ನಡೆದಿದ್ದು ಕುಂದಾನಗರಿಗೆ ಶಿಫ್ಟ್ ಆಗಲು ಒಂದು ನೆಪವಾಗಿತ್ತು. ಕೆಪಿಸಿಸಿಯಿಂದ ನಿಯೋಜನೆಗೊಂಡಿರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿಗಳಾದ ಆರ್.ವಿ. ದೇಶಪಾಂಡೆ, ಧ್ರುವ ನಾರಾಯಣ, ತನ್ವೀರ್ ಶೇಠ್, ಶಿವಾನಂದ ಪಾಟೀಲ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಶುಕ್ರವಾರ ಸಂಜೆ 5.30ರಿಂದ 2 ತಾಸು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಹು-ಧಾ ಸೆಂಟ್ರಲ್ ಹಾಗೂ ಧಾರವಾಡ ವಿಧಾನಸಭೆ ಕ್ಷೇತ್ರದ 9 ವಾರ್ಡ್ಗಳ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಲಾಯಿತು. ಈ ಸಭೆಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕ ನಾಗರಾಜ ಛಬ್ಬಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಪಿ.ಕೆ. ರಾಯನಗೌಡ್ರ. ಸದಾನಂದ ಡಂಗನವರ, ಇತರರು ಇದ್ದರು. ಗುರುವಾರ ಹುಬ್ಬಳ್ಳಿಯಲ್ಲಿ ಹು-ಧಾ ಪೂರ್ವ ಹಾಗೂ ಪಶ್ಚಿಮ ವಿಧಾನಸಭೆ ಕ್ಷೇತ್ರಗಳ ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿತ್ತು. ಗುರುವಾರ ಸಭೆಯ ಬಳಿಕ ಹುಬ್ಬಳ್ಳಿಯಿಂದ ಆರ್.ವಿ. ದೇಶಪಾಂಡೆ ಹಾಗೂ ಧ್ರುವ ನಾರಾಯಣ ಅವರು ಹಳಿಯಾಳಕ್ಕೆ ಹಾಗೂ ಸತೀಶ ಜಾರಕಿಹೊಳಿ ಹಾಗೂ ಶಿವಾನಂದ ಪಾಟೀಲ ಬೆಳಗಾವಿಗೆ ತೆರಳಿದ್ದರು. ತನ್ವೀರ್ ಶೇಠ್ ಹುಬ್ಬಳ್ಳಿಯಲ್ಲಿಯೇ ವಾಸ್ತವ್ಯ ಮಾಡಿದ್ದರು. ಶುಕ್ರವಾರ ಬೆಳಗ್ಗೆಯೇ ಎಲ್ಲರೂ ಬೆಳಗಾವಿಗೆ ಪ್ರಯಾಣಿಸಿದ್ದರು.