ಹೊರ್ತಿ:ಕಾರ್ತಿಕ ಮಾಸದಲ್ಲಿ ಗುಡಿ ಗುಂಡಾರಗಳಲ್ಲಿ ದೀಪ ಬೆಳಗಿದಂತೆ ಮನೆ ಮನೆಗಳಲ್ಲಿ ಜ್ಞಾನದ ದೀಪ ನಿರಂತರ ಬೆಳಗಬೇಕು ಎಂದು ಶಿರಶ್ಯಾಡದ ಅಭಿನವ ಮುರಘೇಂದ್ರ ಶ್ರೀ ಹೇಳಿದರು.
ಹೊರ್ತಿ ರೇವಣಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ 6ನೇ ವರ್ಷದ ಕಾರ್ತಿಕ ಲಕ್ಷ ದೀಪೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದೀಪ ಶುಭದ ಸಂಕೇತ. ಬೆಳಕು ಜ್ಞಾನವನ್ನು, ಕತ್ತಲೆ ಅಜ್ಞಾನವನ್ನು ಸೂಚಿಸುತ್ತದೆ. ಜ್ಞಾನ ರೂಪವಾದ ಶುದ್ಧ ಚೈತನ್ಯವೇ ಭಗವಂತ. ದೀಪವನ್ನು ದೇವರ ರೂಪ ಎನ್ನುತ್ತೇವೆ. ಎಣ್ಣೆ, ಬತ್ತಿ ಹಾಕಿ ದೀಪ ಬೆಳಗುವುದರ ಹಿಂದೆ ಆಧ್ಯಾತ್ಮಿಕ ಸಂದೇಶವಿದೆ. ನಮ್ಮ ಚಿಂತನೆ, ಆಚಾರ-ವಿಚಾರಗಳು ಪೂಜ್ಯವಾಗಿರಬೇಕು ಎಂದರು.
ಚಡಚಣ ವಿರಕ್ತ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಬಂಗಾರವನ್ನು ಕತ್ತಲಲ್ಲಿ ಇಟ್ಟರೆ ಹೊಳೆಯುವುದಿಲ್ಲ. ಅದು ಹೊಳೆಯಬೇಕಾದರೆ ಬೆಳಗಿನ ಅಗತ್ಯವಿರುತ್ತದೆ. ಜ್ಞಾನದ ಸಂಕೇತವಾದ ಬೆಳಕು ಎಲ್ಲರ ಬಾಳನ್ನೂ ಬೆಳಗಲಿ ಎಂದರು.
ಕನ್ನೂರ ಗುರುಮಠದ ಸೋಮಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಸಾಕ್ಷಾತ್ ಶಿವಸ್ವರೂಪಿಯಾದ ಬೆಳಕು ಎಲ್ಲರ ಬದುಕಿನ ಕತ್ತಲೆ ಕಳೆಯಲಿ. ಲಕ್ಷ ದೀಪೋತ್ಸವ ಎಲ್ಲರನ್ನೂ ಸನ್ಮಾರ್ಗದತ್ತ ನಡೆಸಲಿ ಎಂದರು.
ಹತ್ತಳ್ಳಿಯ ಗುರು ಗುರುಪಾದೇಶ್ವರ ಶಿವಾಚಾರ್ಯರು, ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯರು, ನಾಗಠಾಣ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನಿವೃತ್ತ ಉಪನ್ಯಾಸಕ ಎಸ್.ಎಸ್.ಪೂಜಾರಿ ಮಾತನಾಡಿದರು.
ಹೊರ್ತಿ ರೇವಣಸಿದ್ಧೇಶ್ವರ ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ಖೈನೂರ ಅಧ್ಯಕ್ಷತೆ ವಹಿಸಿದ್ದರು. ಅಣ್ಣಪ್ಪಗೌಡ ಪಾಟೀಲ, ಬುದ್ಧಪ್ಪ ಭೋಸಗಿ, ಶ್ರೀಮಂತ ಇಂಡಿ, ಗುರಣಗೌಡ ಪಾಟೀಲ, ಗುರುಲಿಂಗಪ್ಪ ತೇಲಿ, ಗುರಪ್ಪ ಪೂಜಾರಿ, ಬುದ್ಧಪ್ಪ ಭೋಸಗಿ, ದಾನಪ್ಪ ದುರ್ಗದ, ಮಲಕಣ್ಣ ಮೇಡೆಗಾರ, ಸಂಗಣ್ಣ ಕಡೆಮನಿ, ಸಂಗಪ್ಪ ಭೋಸಗಿ, ಗುರುಲಿಂಗಪ್ಪ ಕಡಿಮನಿ, ಬಸವರಾಜ ಜಂಬಗಿ, ಶಿವಲಿಂಗಪ್ಪ ಖೈನೂರ, ವಿಶ್ವನಾಥ ಜಂಗಮಶೆಟ್ಟಿ, ಚಾಂದ ಮುಲ್ಲಾ, ಪವನ ಕುಲಕರ್ಣಿ, ಶರಣಬಸು ಡೋಣಗಿ ಇತರರಿದ್ದರು.