ಚಿಕ್ಕಮಗಳೂರು: ಆಸೆಯನ್ನು ಬಿಡಬೇಕು ಎಂದ ಆಯ್ದಕ್ಕಿ ಲಕ್ಕಮ್ಮನ ವಚನಗಳು ಬುದ್ಧನ ಪ್ರಮುಖ ಬೋಧನೆಯನ್ನು ನೆನಪಿಸುತ್ತದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಕಾವ್ಯಾ ಗಂಗಾಧರ್ ತಿಳಿಸಿದರು.
ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘದಿAದ ಆಯೋಜಿಸಲಾಗಿದ್ದ ಅಗೆ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಸೆ, ಭಕ್ತಿ ಮತ್ತು ಕಾಯಕ ಲಕ್ಕಮ್ಮನ ವಚನಗಳ ಪ್ರಮುಖ ಸಂಗತಿಯಾಗಿತ್ತು. ಆಸೆಯನ್ನು ಬಿಟ್ಟರೆ ಸಂತೃಪ್ತಿ ಜೀವನ ಸಾಧ್ಯ. ಕಾಯಕದಿಂದ ಮುಕ್ತಿ ಎಂದು ಸಾರಿದ್ದರು. ಜೊತೆಗೆ ಭಕ್ತಿಮಾರ್ಗದಲ್ಲಿ ನಡೆದಾಕೆ ಎಂದು ಸ್ಮರಿಸಿದರು.
ಅನ್ನಕ್ಕೆ ಬೇಕಾದ ಅಕ್ಕಿಯನ್ನು ಆಯ್ದುತಂದು ಜೀವನ ಸಾಗಿಸಿದಂತಹ ಮಹಾಸಾಧ್ವಿ ಲಕ್ಕಮ್ಮ. ಆಕೆಯ ಪತಿ ಮಾರಯ್ಯ ಒಮ್ಮೆ ಹೆಚ್ಚು ಅಕ್ಕಿ ಆಯ್ಕುಕೊಂಡು ಬಂದಾಗ ಆಸೆ ಎಂಬುದು ಅರಸನಿಗಲ್ಲದೆ ಶಿವಶರಣರಿಗೆ ಉಂಟೇ ಎಂದು ಆಸೆ ಮತ್ತು ಸಂಗ್ರಹವನ್ನು ತಿರಸ್ಕರಿಸಿದ ಲಕ್ಕಮ್ಮನ ಈ ವಚನ ಹೆಚ್ಚು ಜನಪ್ರಿಯ. ಅಗೆಹುಣ್ಣಿಮೆ ಇಂದು ಗೌತಮಬುದ್ಧನ ಜನ್ಮದಿನವೂ ಹೌದು. ಆಸೆಯೆ ದುಃಖಕ್ಕೆ ಮೂಲಕಾರಣ ಎಂಬುದು ಆತನ ಪ್ರಮುಖ ಬೋಧನೆ. ಇಬ್ಬರ ಬೋಧನೆಗಳಲ್ಲಿ ಸಾಮ್ಯತೆಯನ್ನು ಗಮನಿಸಬಹುದು ಎಂದರು.
ವಚನ ಎಂದರೆ ಮಾತು. ಮಾತಿನ ಮೂಲಕವೇ ಅನುಭವಮಂಟಪದಲ್ಲಿ ವಿಚಾರಮಂಥನ ನಡೆಸಿ ಸಮಾಜ ಸುಧಾರಣೆಗೆ ಶ್ರಮಿಸಿದವರು ಶರಣರು. ಪುರುಷನ ಯಶಸ್ಸಿನ ಹಿಂದೆ ಹೆಣ್ಣು ಇರುವ ಹಾಗೆ ಆಯ್ದಕ್ಕಿ ಲಕ್ಕಮ್ಮ ತನ್ನ ಪತಿ ಮಾರಯ್ಯನಿಗೂ ಮಾರ್ಗದರ್ಶಕಳಾಗಿದ್ದಳು. ಅನುಭವ ಮಂಟಪದ ಚರ್ಚೆಯಲ್ಲೇ ನಿರತನಾದ ಪತಿಯನ್ನು ಎಚ್ಚರಿಸಿ ಕಾಯಕಕ್ಕೆ ಕಳುಹಿಸುತ್ತಿದ್ದ ಪರಿ ಮಹತ್ವದ್ದು. ಇಷ್ಟದೇವರಾದ ಅಮರೇಶ್ವರಲಿಂಗ ನಾಮಾಂಕಿತದಲ್ಲಿ ೨೫ ರಿಂದ ೩೦ ವಚನಗಳನ್ನು ರಚಿಸಿರುವುದು ಲಭ್ಯವಿದೆ ಎಂದರು.
ನಿರAತರ ಪ್ರಯತ್ನ ಇದ್ದಾಗ ಮಾತ್ರ ಸಾಧನೆ ಸಾಧ್ಯ. ೧೨ನೆ ಶತಮಾನದ ಅನುಭವ ಮಂಟಪದಲ್ಲಿ ಮಹಿಳಾ ಶಕ್ತಿ ಎಂದರೆ ಅದು ಅಕ್ಕಮಹಾದೇವಿ. ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿಯಾಗಿದ್ದು ೪೩೫ಕ್ಕೂ ಹೆಚ್ಚು ವಚನಗಳನ್ನು ರೂಪಿಸಿದ್ದಾರೆ. ಶರಣರು ಭಕ್ತಿ ಮತ್ತು ಕಾಯಕದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಸಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ವಹಿಸಬೇಕು. ಸಮಾಜದಲ್ಲಿ ಬರುವ ಎಡರು ತೊಡರುಗಳನ್ನು ಎದುರಿಸಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಸಂಘಟಿತರಾದಾಗ ಮತ್ತಷ್ಟು ಬಲ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಭಾರತಿ ಶಿವರುದ್ರಪ್ಪ, ಸಹಕಾರ್ಯದರ್ಶಿ ನಾಗಮಣಿ ಕುಮಾರ್, ನಿರ್ದೇಶಕಿ ಹೇಮಲತಾ, ಪ್ರಮುಖರಾದ ಲತಾ ಪ್ರಸನ್ನ, ಸವಿತಾ ಚಂದ್ರು, ಚೈತ್ರಾ ಪ್ರಕಾಶ, ಶೋಭಾ ಸತೀಶ್, ಗಿರಿಜಾ ಮತ್ತಿತರರಿದ್ದರು.