ಸವದತ್ತಿ: ಕೆರೆಗಳು ಹಳ್ಳಿಗಳ ಜೀವನಾಡಿಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಕೆರೆಗಳು ಸಹಕಾರಿಯಾಗಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಮಹಾಮುನಿ ಕೆರೆ ಬಳಿ ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮದಿಂದ ಮಹಾಮುನಿ ಕೆರೆ ಹಾಗೂ ನಾಲಾ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸುತ್ತಮುತ್ತಲಿನ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳು ಸೇರಿ ಪ್ರಾಣಿ-ಪಕ್ಷಿಗಳ ನೀರಿನ ಬವಣೆ ನೀಗಿಸಲು ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ನೀರಾವರಿ ನಿಗಮದಡಿ 3.50 ಕೋಟಿ ರೂ. ವೆಚ್ಚದಲ್ಲಿ ಮಹಾಮುನಿ ಕೆರೆ ಅಭಿವೃದ್ಧಿ ಹಾಗೂ ತಾಲೂಕಿನ ಹಿರೇಉಳ್ಳಿಗೇರಿ ಗ್ರಾಮದ ಬಳಿ 5 ಕೋಟಿ ರೂ.ವೆಚ್ಚದಲ್ಲಿ ನಾಲಾ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ನಾಲಾ ಅಭಿವೃದ್ಧಿಯಿಂದ ಈ ಭಾಗದ ರೈತರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಗುಣಮಟ್ಟದ ಜತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಶಿವಾನಂದ ಪಟ್ಟಣಶೆಟ್ಟಿ, ಮಹಾಬಲೇಶ್ವರ ಪುರದಗುಡಿ, ಕೆ.ಬಿ.ಸಜ್ಜನಶೆಟ್ಟಿ, ಬಸವರಾಜ ಶಿರಸಂಗಿ, ಪಕ್ರುಸಾಬ್ ದೊಡ್ಡಮನಿ, ಎ್. ವೈ.ಗಾಜಿ, ಪ್ರವೀಣ ರಾಮಪ್ಪನವರ ಇತರರಿದ್ದರು.