ಜಿಲ್ಲೆ

ನಗರೀಕರಣದಿಂದ ಕೆರೆಗಳು ಕಣ್ಮರೆ

ಆರ್.ಕೃಷ್ಣ

ಆರ್.ಕೃಷ್ಣ ಮೈಸೂರು

ನಗರೀಕರಣದಿಂದ ನಗರ ಸೇರಿದಂತೆ ಜಿಲ್ಲೆಗೆ ಜೀವಜಲದಂತಿದ್ದ ಕೆರೆಗಳು ಈಗ ಒಂದೊಂದೆ ಕಣ್ಮರೆ ಆಗುತ್ತಿವೆ. ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರದಷ್ಟು ಇರುವ ಕೆರೆಗಳಲ್ಲಿ 351ಕ್ಕೂ ಹೆಚ್ಚು ಕೆರೆಗಳು ಒತ್ತುವರಿಯಾಗಿರುವುದಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷೃವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

ರಾಜಾಶ್ರಯದಲ್ಲಿ ಮೈಸೂರು ಅನೇಕ ಕೆರೆ-ಕಟ್ಟೆಗಳನ್ನು ಹೊಂದಿತ್ತು. ಕೃಷಿಗೆ ನೀರು, ದನಕರುಗಳು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಮತ್ತು ಮೇವಿಗೆ ವರ್ಷಪೂರ್ತಿ ನೀರು ಒದಗಿಸಲು ಈ ಕೆರೆಗಳು ಜಲಾಶ್ರಯ ತಾಣಗಳಾಗಿದ್ದವು. ಜತೆಗೆ ಜನವಸತಿ, ಜಮೀನು ಹಾಗೂ ಗೋಮಾಳಕ್ಕೆ ಅವಶ್ಯಕವಾಗಿದ್ದವು.

ನಗರ ಪ್ರದೇಶದಲ್ಲಿ ಕೆರೆಗಳನ್ನು ಮುಚ್ಚಿ ಲೇಔಟ್ ಮಾಡಿಕೊಂಡು ಮನೆ, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿದ್ದರೆ, ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಕೆರೆಗಳ ಸುತ್ತಮುತ್ತಲೂ ಕೃಷಿ ಜಮೀನಿನವರು ಪ್ರಭಾವಿಗಳು ಕೆರೆಯನ್ನೆ ಒತ್ತುವರಿ ಮಾಡಿಕೊಂಡಿರುವ ನಿದರ್ಶನಗಳಿವೆ.

ಈಗ ನಡೆದಿರುವ ಸುಮಾರು 2,400 ಕೆರೆಗಳ ಸರ್ವೇಯಲ್ಲಿ 350ಕ್ಕೂ ಹೆಚ್ಚು ಒತ್ತುವರಿಯಾಗಿದೆ. ಇನ್ನೂ 584 ಕೆರೆಗಳ ಸರ್ವೇ ಕಾರ್ಯವನ್ನು ಭೂ ದಾಖಲೆಗಳ ಇಲಾಖೆ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದೆ. ಇವುಗಳ ಸರ್ವೇ ಕಾರ್ಯ ಮುಗಿದರೆ ಕೆರೆಗಳ ಒತ್ತುವರಿ ಪ್ರಮಾಣ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

ಸದ್ಯದ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿಯೇ ಅತಿ ಹೆಚ್ಚು ಕೆರೆಗಳು ಒತ್ತುವರಿಯಾಗಿದೆ. ಭೂ ದಾಖಲೆಗಳ ಮಾಪನ ಇಲಾಖೆಯ ಅಧಿಕಾರಿಗಳು ಕೆರೆಗಳ ಒತ್ತುವರಿ ಸರ್ವೇ ನಡೆಸಿ, ಜಿಲ್ಲಾಡಳಿತಕ್ಕೆ ವರದಿ ನೀಡಿದೆ. ಆದರೂ ಕೆರೆಗಳ ಒತ್ತುವರಿ ತೆರವುಗೊಳಿಸದೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಕೆರೆಗಳ ಒತ್ತುವರಿಯಲ್ಲಿ ಸಾಕಷ್ಟು ಪ್ರಭಾವಿಗಳಿದ್ದು, ತೆರವುಗೊಳಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಪ್ರತಿಯೊಂದೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾಳಜಿ ವಹಿಸಬೇಕು. ಕೆರೆಗಳು ಒತ್ತುವರಿಯಾಗದಂತೆ ತಡೆಯುವುದು ಅವರ ಆದ್ಯ ಕರ್ತವ್ಯ. ಸರ್ವೇ ಮೂಲಕ ಕೆರೆ ವ್ಯಾಪ್ತಿಯ ಬಗ್ಗೆ ಮಾಹಿತಿ ಪಡೆದು ತಂತಿ ಬೇಲಿ ಅಳವಡಿಸುವ ಕಾರ್ಯ ನಡೆಸಬೇಕು. ಈ ಸಂಬಂಧ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದರೂ, ಆ ಕಾರ್ಯ ಮಾತ್ರ ನಡೆಯದೆ ಕೇವಲ ಕಾಗದ, ಪತ್ರದಲ್ಲಿಯೇ ಉಲ್ಲೇಖವಾಗುತ್ತಿದೆ. ಹಾಗಾಗಿ ಅಂರ್ತಜಲ ಮೂಲವಾಗಿರುವ ಪರಿಸರ ಸಂರಕ್ಷಣೆಗಾಗಿ ಕೆರೆಗಳನ್ನು ಸಂರಕ್ಷಿಸಬೇಕು ಎನ್ನುವ ಒತ್ತಾಯ ಪರಿಸರ ಪ್ರೇಮಿಗಳದ್ದಾಗಿದೆ.

584 ಕೆರೆಗಳ ಸರ್ವೇ ಬಾಕಿ

ಜಿಲ್ಲೆಯಲ್ಲಿ 2,991 ಕೆರೆಗಳಿದ್ದು, 2,407 ಕೆರೆಗಳ ಸರ್ವೇಯಾಗಿದೆ. ಇವುಗಳಲ್ಲಿ 1,169 ಕೆರೆಗಳು ಒತ್ತುವರಿ ಎಂದು ಗುರುತಿಸಲಾಗಿದ್ದು, 818 ಕೆರೆಗಳ ತ್ತುವರಿ ತೆರವುಗೊಳಿಸಲಾಗಿದೆ. ಇನ್ನು 351 ಕೆರೆಗಳ ಒತ್ತುವರಿ ತೆರವುಗೊಳಿಸಬೇಕಿದೆ. 584 ಕೆರೆಗಳ ಸರ್ವೇ ಅಗಬೇಕಾಗಿದೆ.

ನಗರದಲ್ಲಿಯೇ ಕೆರೆಗಳ ಕಣ್ಮರೆ

ಸಾಂಸ್ಕೃತಿಕ ನಗರಿಯಲ್ಲಿ ಸಮೃದ್ಧವಾಗಿ ಕೆರೆಗಳನ್ನು ನಿರ್ಮಾಣ ಮಾಡಲಾಗಿತ್ತು. ರಾಜರ ಆಳ್ವಿಕೆಯಲ್ಲಿ ಕುಡಿಯುವ ನೀರಿಗಾಗಿ ಅಲ್ಲಲ್ಲಿ ದೊಡ್ಡ, ದೊಡ್ಡ ಕೆರೆಗಳನ್ನು ಕಟ್ಟಿಸಿ ಜನ, ಜಾನುವಾರುಗಳಿಗೆ ಜೀವ ಜಲ ನೀಡಿದ್ದರು.

ನಗರದ ವ್ಯಾಪ್ತಿಯಲ್ಲಿಯೇ ಸುಮಾರು 20ಕ್ಕೂ ಹೆಚ್ಚು ಕೆರೆಗಳು ಇದ್ದರೂ ಈಗ ಕೇವಲ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಇವೆ. ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡದೆ ಇರುವುದರಿಂದ ಇರುವ ಕೆರೆಗಳಲ್ಲಿಯೂ ಕೆಲವು ಕೆರೆ ಸಂಖ್ಯೆ ಕ್ಷೀಣಿಸುತ್ತಿದ್ದು, ರಿಯಲ್ ಎಸ್ಟೇಟ್ ದಂಧೆಕೋರರ ಪಾಲಾಗುತ್ತಿವೆ.

ನಗರದಲ್ಲಿ ಈ ಹಿಂದೆ ದೇವನೂರು ಕೆರೆ, ಬೊಮ್ಮನಹಳ್ಳಿ ಕೆರೆ, ಕಾಮನಕೆರೆ/ಹುಂಡಿಕೆರೆ, ಹೆಬ್ಬಾಳ ಕೆರೆ, ಬೋಗಾದಿ ಮರಿಯಪ್ಪ ಕೆರೆ, ಹಿನಕಲ್ ಕೆರೆ, ರಾಯನಕೆರೆ ವಸವನ ಕಟ್ಟೆ, ತಾವರೆ ಕಟ್ಟೆ, ಪರಸಯ್ಯನ ಕೆರೆ, ದೊಬಿಘಾಟ್ ಕೆರೆ, ದೊಡ್ಡ ಕೆರೆ, ಜೀವಣ್ಣರಾಯನ ಕಟ್ಟೆ, ಸುಬ್ಬರಾಯನ ಕೆರೆ, ಕ್ಯಾತಮಾರನಹಳ್ಳಿ ಕೆರೆ, ಮಳಲವಾಡಿ ಕೆರೆ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಲಿಂಗಾಂಬುದಿ ಕೆರೆ, ದಳವಾಯಿ ಕೆರೆ, ಅಯ್ಯಜಯ್ಯನಹುಂಡಿ ಕೆರೆ ಸೇರಿದಂತೆ ಇನ್ನಿತರ ಕೆರೆಗಳು ಇದ್ದವು.

ಅರಮನೆಗೆ ನೀರು ಪೂರೈಕೆ ಮಾಡುತ್ತಿದ್ದ ದೊಡ್ಡಕೆರೆ ದಸರಾ ವಸ್ತು ಪ್ರದರ್ಶನವಾಗಿದ್ದರೆ, ಜೀವಣ್ಣರಾಯನಕಟ್ಟೆ ಜೆ.ಕೆ.ಮೈದಾನವಾಗಿದೆ. ಇನ್ನು ಸುಬ್ಬರಾಯನ ಕೆರೆ, ಸ್ವಾತಂತ್ರೃ ಹೋರಾಟಗಾರರ ಉದ್ಯಾನವಾಗಿದೆ. ಮಳಲವಾಡಿಕೆರೆ, ದೇವನೂರು ಕೆರೆ ಒತ್ತುವರಿಯಾಗಿ ಕೆರೆಯ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಬೊಮ್ಮನಹಳ್ಳಿಯ ಕೆರೆಯನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡು ನಿವೇಶನ ಮಾಡಲು ಹೊರಟಿದೆ. ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ. ದಳವಾಯಿಕೆರೆ ಕೊಳಚೆ ಗುಂಡಿಯಾಗಿದ್ದು, ದುರ್ನಾತ ಬೀರುತ್ತಿದೆ. ಈ ಕೆರೆಯನ್ನು ವಾಯು ವಿಹಾರ, ಊಟಿಯಂತೆ ಬೋಟಿಂಗ್ ಸ್ಥಳ ಮಾಡಲು ಪ್ರಯತ್ನ ನಡೆದಿದ್ದರೂ ಅದು ಕಾರ್ಯಗತವಾಗಿಲ್ಲ.

ಸದ್ಯಕ್ಕೆ ಕಾರಂಜಿ, ಕುಕ್ಕರಹಳ್ಳಿ, ಲಿಂಗಾಂಬುದಿ ಕೆರೆಗಳನ್ನು ಪ್ರವಾಸಿಗರು, ವಾಯು ವಿಹಾರಿಗಳಿಗೆ ಅನುಕೂಲವಾಗುವಂತೆ ತಕ್ಕ ಮಟ್ಟಿಗೆ ನಿರ್ವಹಣೆ ಮಾಡಲಾಗುತ್ತಿದೆ.

ಕೆರೆ ಒತ್ತುವರಿ ಮಾಡುವವರಿಗೆ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ.ವರೆಗೆ ದಂಡ ವಿಧಿಸಬಹುದು ಎನ್ನುವ ಕಾನೂನು ಇದ್ದರೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಾನೂನು ಏನು ಹೇಳುತ್ತದೆ?

ಅಂತರ್ಜಲ ವೃದ್ಧಿ, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು, ಪರಿಸರ ಸಂರಕ್ಷಣೆ ಸಲುವಾಗಿ ಕೆರೆ, ಸರೋವರಗಳನ್ನು ಸಂರಕ್ಷಿಸಬೇಕಾಗಿದೆ. ಅದರಲ್ಲಿ ಅಧಿಕಾರಿಗಳು, ಸಂಘ-ಸಂಸ್ಥೆ, ಸಾರ್ವಜನಿಕರು ಪ್ರಮುಖ ಪಾತ್ರ ವಹಿಸಬೇಕಾಗಿದೆ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಕೆರೆ-ಕಟ್ಟೆಗಳನ್ನು ಒತ್ತುವರಿ ಮಾಡಿದರೆ ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಸಾವಿರದಿಂದ 20 ಸಾವಿರ ರೂ.ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2014ರ ಪ್ರಕಾರ ಪ್ರತಿ ಜಿಲ್ಲೆಗಳಲ್ಲಿ ಕೆರೆ-ಸರೋವರಗಳ ಸಂರಕ್ಷಣೆಗಾಗಿ ಜಿಲ್ಲಾ ಕಾರ್ಯನಿರ್ವಹಣಾ ಪ್ರಾಧಿಕಾರ ರಚಿಸಬೇಕು, ಅದರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಾಧ್ಯಕ್ಷರಾಗಿದ್ದು, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿ ಕೆರೆ ಒತ್ತುವರಿ ದೂರುಗಳನ್ನು ಪರಿಶೀಲಿಸಿ ನಿಯಮ ಉಲ್ಲಂಘಿಸಿದವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ವಹಿಸಬೇಕು.

ಕೆರೆ ಒತ್ತುವರಿಗೆ ಬಳಸಿದ ಸಾಧನ, ಸಲಕರಣೆ, ಯಂತ್ರೋಪಕರಣ, ದೋಣಿ ಅಥವಾ ಯಾವುದೇ ವಸ್ತುಗಳು ಇದ್ದರೆ ವಶ ಪಡಿಸಿಕೊಳ್ಳಬಹುದಾಗಿದೆ. ಕೆರೆ-ಕಟ್ಟೆಗಳಿಗೆ ನೀರು ಹರಿದು ಬರುವ ಹಳ್ಳ, ತೊರೆ, ರಾಜಕಾಲುವೆಗಳನ್ನು ಮುಚ್ಚುವುದು ಸಹ ಅಪರಾಧ.

ಒತ್ತುವರಿ ತೆರವುಗೊಳಿಸಲಾಗುವುದು

ಕೆರೆಗಳು ಒತ್ತುವರಿಯಾಗದಂತೆ ತಡೆಯಲು ಆಯಾ ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡಲಾಗುವುದು. ಸಾರ್ವಜನಿಕ ಜಾಗವನ್ನು ಯಾರೂ ಯಾವುದೇ ಕಾರಣಕ್ಕೂ ಒತ್ತುವರಿ ಮಾಡಿಕೊಳ್ಳದಂತೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.

ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾಧಿಕಾರಿ