ಆನೇಕಲ್​ ತಾಲೂಕಿನ ಆದೂರು ಕೆರೆಗೆ ಸಣ್ಣ ನೀರಾವರಿ ಇಲಾಖೆ ಗುಣ ನಿಯಂತ್ರಣ ವಿಭಾಗದ ಕಾರ್ಯಪಾಲಕ ಇಂಜಿನಿಯರ್​ ರಾಯ್ಕರ್​, ಸಹಾಯಕ ಇಂಜಿನಿಯರ್​ ರಜನಿ, ಪ್ರಾಜೆಕ್ಟ್​ ಮ್ಯಾನೇಜರ್​ ಮೆಘಾ ಕಂಪನಿಯ ಭಾಸ್ಕರ್​ ಭೇಟಿ ನೀಡಿ ಪರಿಶೀಲಿಸಿದರು. ಬಿಜೆಪಿ ಮುಖಂಡ ಮಹದೇವಯ್ಯ, ಕಾಂಗ್ರೆಸ್​ ಮುಖಂಡ ಕೃಷ್ಣಮೂರ್ತಿ ಹಾಜರಿದ್ದರು. 
ಜಿಲ್ಲೆ

ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗಳ ತಪಾಸಣೆ: ಮಲಿನ ನೀರು ಹರಿಯುತ್ತಿರುವ ಆರೋಪ, ಪರೀಕ್ಷೆಗಾಗಿ ನೀರಿನ ಮಾದರಿ ಸಂಗ್ರಹ

Bengaluru Rural

ಆನೇಕಲ್​: ಕೆಸಿ ವ್ಯಾಲಿ ಯೋಜನೆ ಮೂಲಕ ಕೆರೆಗಳಿಗೆ ಸಂಸ್ಕರಿತ ನೀರು ಹರಿಸದೆ ಕಲುಷಿತ ನೀರು ಬಿಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಆನೇಕಲ್​ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಲ್ಯಾಬ್​ ಪರೀಕ್ಷೆಗಾಗಿ ಕೆರೆಗಳ ನೀರು ಹಾಗೂ ಮನೆಗಳಲ್ಲಿನ ಕೊಳಾಯಿ ನೀರಿನ ಮಾದರಿಗಳನ್ನು ಸಂಗ್ರಹಿಸಿದರು.


69 ಕೆರೆಗಳಿಗೆ ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ತುಂಬಿಸಲಾಗುತ್ತಿದೆ. ಆದರೆ ಸಂಸ್ಕರಿಸಿದ ನೀರು ಹರಿಸದೆ ಮಲಿನ ನೀರು ಬಿಡಲಾಗುತ್ತಿದೆ ಎಂದು ಆದೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


ತಾಲೂಕಿನ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ, ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಯೋಜನೆ ಯಶಸ್ವಿಯಾಗಿದ್ದು ಈ ಭಾಗದಲ್ಲೂ ಯಶಸ್ಸಿಯಾಗಲಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿ ನಾಗರಾಜ್​ ಹೇಳಿದರು.


ಕೆರೆಗೆ ಹರಿಸಿರುವ ನೀರು ಪ್ರಾಯೋಗಿಕವಾಗಿದೆ. ಇನ್ನು ಮುಂದೆ ಪೈಪ್​ ಮೂಲಕ ನೀರು ಸರಬರಾಜು ಮಾಡುವ ಮುನ್ನ ಮುತ್ತಾನೂರು ಕೆರೆಯಿಂದ ಯಾವ ರೀತಿ ಪರಿಶೀಲನೆ ಮಾಡಬೇಕು ಎಂಬುದನ್ನು ಗಮನಿಸಿ ಬಳಿಕ ಹರಿಸಲಾಗುವುದು ಎಂದರು.

ಕುಡಿಯಲು ಯೋಗ್ಯ: ಆದೂರು ಗ್ರಾಮದಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವ ಬಗ್ಗೆ ಸ್ಥಳಿಯರು ಆರೋಪಿಸಿದರು. ಈ ವೇಳೆ ಜನರು ತೋರಿಸಿದ ನೀರನ್ನು ಕುಡಿದ ಅಧಿಕಾರಿಯೊಬ್ಬರು ಈ ನೀರು ಕುಡಿಯಲು ಯೋಗ್ಯವಾಗಿದೆ ಎಂದರು.

ಪುರಸಭೆ ನಿರ್ಲಕ್ಷ್ಯ: ಕೆರೆಗಳಿಗೆ ನೀರು ಹರಿಸುವ ಯೋಜನೆಯಿಂದ ಯಾವುದೇ ತೊಂದರೆ ಆಗಿಲ್ಲ, ಚಂದಾಪುರ ಪುರಸಭೆ ನಿರ್ಲಕ್ಷ್ಯದಿಂದ ತೊಂದರೆ ಎದುರಾಗುತ್ತಿದೆ. ಚೋಳರಕೆರೆಯ ಮಲಿನ ನೀರು ಮುತ್ತಾನಲ್ಲೂರು ಕೆರೆಗೆ ಹರಿದು ಹೋಗುತ್ತಿದೆ, ಪುರಸಭೆ ಕೆರೆಯಿಂದ ಹರಿದು ಹೋಗುತ್ತಿರುವ ನೀರಿಗೆ ಪ್ರತ್ಯೇಕ ರಾಜ ಕಾಲುವೆ ನಿರ್ಮಿಸಿ ಮಲಿನ ನೀರು ಹೊರ ಹೋಗುವಂತೆ ಮಾಡಿದರೆ ಯೋಜನೆ ಸಫಲವಾಗಲಿದೆ ಎಂದು ಕ್ವಾಲಿಟಿ ಕಂಟ್ರೋಲ್​ ಬೋರ್ಡ್​ ಇಂಜಿನಿಯರ್​ ಹರೀಶ್​ ಹೇಳಿದರು.

ವಿಜಯವಾಣಿ ವರದಿ: "ಕೆರೆಗಳಿಗೆ ತ್ಯಾಜ್ಯ ನೀರು' ಶೀರ್ಷಿಕೆಯಡಿ ಜು.8ರಂದು ವಿಜಯವಾಣಿ ವರದಿ ಮಾಡಿತ್ತು. ಮಲಿನ ನೀರು ಕೆರೆಗಳಿಗೆ ಹರಿದು ಸ್ಥಳಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿತ್ತು.


ಆನೇಕಲ್​ ತಾಲೂಕಿಗೆ ಮಹತ್ತರವಾದ 245 ಕೋಟಿ ರೂಪಾಯಿ ವೆಚ್ಚ ಏತ ನೀರಾವರಿ ಯೋಜನೆಯನ್ನು ಶಾಸಕರು ತಂದು ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಅಧಿಕಾರಿಗಳು ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವುದನ್ನು ಬಿಟ್ಟು ಕಲುಷಿತ ನೀರನ್ನು ಹರಿಸುತ್ತಿದ್ದು, ಸಮಸ್ಯೆ ಸರಿಪಡಿಸಬೇಕು.

|ಕೃಷ್ಣಮೂರ್ತಿ ಆದೂರು ಗ್ರಾಮಸ್ಥರು


ಸಮಸ್ಯೆಯ ಬಗ್ಗೆ ವಿಜಯವಾಣಿ ವರದಿ ಮಾಡಿತ್ತು. ವರದಿ ಆಧರಿಸಿ ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದಾರೆ. ಆದರೆ ಯಾವುದೇ ತೊಂದರೆ ಇಲ್ಲ ಎನ್ನುವ ರೀತಿಯಲ್ಲಿ ಪರಿಶೀಲನೆ ನಡೆಸಿ ವಾಪಸ್​ ತೆರಳಿರುವ ಅಧಿಕಾರಿಗಳು, ಸರಿಯಾದ ರೀತಿಯಲ್ಲಿ ಕೆರೆಯ ಬಗ್ಗೆ ಗಮನಹರಿಸಬೇಕು.
| ಲಲಿತಾ ಮಹದೇವಯ್ಯ ಸುರಗಜಕ್ಕನಹಳ್ಳಿ ಗ್ರಾಪಂ ಅಧ್ಯಕ್ಷ