ಮಂಜುನಾಥ ಎಸ್ ಸಿ ಹೊಸಕೋಟೆ
ಹೊಸಕೋಟೆ ನಗರದ ಪುರಾತನ ಅಗಸನಕೆರೆ ಒತ್ತುವರಿಯಿಂದಾಗಿ ಅಳಿವಿನಂಚಿಗೆ ಜಾರುತ್ತಿದೆ, ಇದರ ಜತೆಗೆ ಕಸಾಯಿಕಾನೆಗಳ ಅಡ್ಡೆಯಾಗಿ ಬದಲಾಗಿದ್ದು ಸದ್ದಿಲ್ಲದೆ ಕೆರೆ ಕಣ್ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 12.17 ಎಕರೆ ಪ್ರದೇಶದಲ್ಲಿ 3 ಎಕರೆಗೂ ಹೆಚ್ಚು ಜಾಗ ಒತ್ತುವರಿ ಮಾಡಿಕೊಂಡು ಹಲವರು ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ ಇದರ ತೆಗೆ ಅಕ್ರಮ ಕಸಾಯಿಕಾನೆ ನಿರ್ಮಾಣ ಮಾಡಿಕೊಳ್ಳಲಾಗಿದ್ದು, ಕಸಾಯಿಖಾನೆಯಲ್ಲಿ ಉತ್ಪತ್ತಿಯಾಗುವ ಪ್ರಾಣಿಜನ್ಯ ತ್ಯಾಜ್ಯ ಕೆರೆಗೆ ಸೇರುತ್ತಿದ್ದು ಕೆರೆಯಲ್ಲೇ ಕೊಳೆಯುವಂತ ಪರಿಸ್ಥಿತಿ ಬಂದಿದೆ.
ಹಣದ ದಂಧೆ: ಒತ್ತುವರಿ ಮಾಡಿ ಮನೆ ಕಟ್ಟಿರುವ ಕೆಲವು ಪ್ರಭಾವಿಗಳು ಈ ಮನೆಗಳನ್ನು ಬೇರೆಯವರಿಗೆ ಬಾಡಿಗೆಗೆ ನೀಡಿ ಪ್ರತಿ ತಿಂಗಳು ಹಣ ಮಾಡುವ ದಂಧೆ ನಡೆಯುತ್ತಿರುವುದಾಗಿ ಸ್ಥಳೀಯರು ಮಾತನಾಡಿಕೊಳ್ಳುತಿದ್ದಾರೆ.ಈ ಬಗ್ಗೆ ಸಾಮಾಜಿಕ ಹೋರಾಟಗಾರರು ಹಾಗೂ ಸ್ಥಳಿಯರು ಜಿಲ್ಲಾಧಿಕಾರಿ, ಲೋಕಾಯುಕ್ತ ಹಾಗೂ ಸರ್ಕಾರಿ ಮುಖ್ಯ ಕಾರ್ಯದರ್ಶಿಯವರಿಗೆ ಹಲವು ಬಾರಿ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಂದ ತಾಲೂಕು ಆಡಳಿತಕ್ಕೆ ಒತ್ತುವರಿ ತೆರವು ಮಾಡಲು ಸೂಚನೆ ನೀಡಲಾಗಿದೆ, ಆದರೆ ಸೂಚನೆ ನೀಡಿ ಹಲವಾರು ತಿಂಗಳುಗಳಾದರೂ ಈ ವರೆಗೆ ತೆರವು ಕಾರ್ಯವನ್ನೇ ಶುರು ಮಾಡದೆ ಇರುವುದು ಹಲವು ಅನುಮಾನಗಳನ್ನು ಮೂಡಿಸಿದೆ.
ಒತ್ತುವರೆ ಜಾಗದಲ್ಲಿ ಕಸಾಯಿಕಾನೆಗಳ ಹಾವಳಿ: ಒತ್ತುವರಿಯಾಗಿರುವ ಅಗಸನ ಕೆರೆಯಲ್ಲಿ ಅನಧಿಕೃತ ಕಸಾಯಿಖಾನೆಗಳು ತಲೆ ಎತ್ತಿದ್ದು ಪ್ರಾಣಿತ್ಯಾಜ್ಯ ತ್ಯಾಜ್ಯವನ್ನು ಕೆರೆ ಭಾಗದಲ್ಲಿ ಸುರಿಯಲಾಗುತ್ತಿದೆ ಇದರಿಂದ ಅಕ್ಕ ಪಕ್ಕದ ಪ್ರದೇಶಗಳಿಗೆ ದುರ್ವಾಸನೆ ಬೀರುತಿದ್ದು ರೋಗಗ್ರಸ್ಥ ಪ್ರದೇಶವಾಗಿ ಮಾರ್ಪಟ್ಟಿದೆ. ಬೀದಿನಾಯಿಗಳು ಹಿಂಡುಗಟ್ಟಲೆ ಸೇರಿ ಪ್ರಾಣಿಜನ್ಯ ತ್ಯಾಜ್ಯಕ್ಕೆ ಮುಗಿಬೀಳುತ್ತವೆ ಇತ್ತ ಕಡೆ ಓಡಾಡುವವ ಮೇಲೂ ಎರಗುವ ದೃಶ್ಯಗಳು ಸಾಮಾನ್ಯವಾಗಿದೆ. ರಾತ್ರಿ ವೇಳೆ ನಾಯಿಗಳ ದಂಡು ಊಳಿಡುವ ಮೂಲಕ ಸುತ್ತಮುತ್ತಲ ಜನರ ನಿದ್ರೆಗೆಡಿಸಿವೆ. ಬೀದಿನಾಯಿಗಳ ಸಂತಾನಶಕ್ತಿ ಹರಣ ಕಾರ್ಯಕ್ರಮವೂ ನನೆಗುದಿಗೆ ಬಿದ್ದಿದ್ದು ಬೀದಿನಾಯಿಗಳ ಉಪಟಳಕ್ಕೆ ಜನ ಹೈರಾಣಾಗಿದ್ದಾರೆ.
ಮಳೆಗಾಲದಲ್ಲಿ ಒತ್ತುವರಿ ಪ್ರದೇಶ ಮುಳುಗಡೆ: ಒತ್ತುವರಿ ಮಾಡಿ ನಿರ್ಮಾಣ ಮಾಡಿಕೊಂಡಿರುವ ಬಹಳಷ್ಟು ಮನೆಗಳಿಗೆ ಮಳೆಗಾಲದಲ್ಲಿ ನೀರು ತುಂಬಿ ಮುಳುಗಡೆಯಾಗುತ್ತದೆ, ಮಳೆಗಾಲ ಶುರುವಾದರೆ ಈ ಭಾಗದ ಜನ ಬೆಚ್ಚಿ ಬೀಳುವಂತಾಗಿದೆ. ಈಗಾಗಲೇ ಕೆರೆ ಪ್ರಾಣಿಜನ್ಯ ತ್ಯಾಜ್ಯದಿಂದ ಕಲುಷಿಗೊಳ್ಳುತ್ತಿದ್ದು ಮಳೆಗಾಲದಲ್ಲಿ ಕೆರೆ ನೀರು ಬಡಾವಣೆಗಳಿಗೆ ನುಗ್ಗಿ ನರಕದೃಶ್ಯ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.
ಈ ಹಿಂದೆ ಕೆರೆ ಜಾಗದಲ್ಲಿ ಒತ್ತುವರಿ ಮಾಡಿ ಮನೆ ಕಟ್ಟಿರುವ ಬಡವರಿಗೆ ಬೇರೆಡೆ ಜಾಗ ನೀಡಿ ಸ್ಥಳಾಂತರಕ್ಕೆ ಆದೇಶವಿದೆ, ಒತ್ತುವರಿ ಮಾಡಿ ವಾಸವಿರುವ ನಿಜವಾದ ಬಡವರಿಗೆ ನಗರದ ವರದಪುರ ಭಾಗದ ಸರ್ಕಾರಿ ಜಾಗದಲ್ಲಿ ಗುಂಪು ಮನೆ ನಿರ್ಮಿಸಿ ಆಶ್ರಯ ಯೋಜನೆಯಡಿ ಬಡವರಿಗೆ ಹಾಗೂ ನಿರಾಶ್ರಿತರಿಗೆ ವ್ಯವಸ್ಥೆ ಮಾಡಿಕೊಡಬಹುದಾಗಿದ್ದು, ಸರ್ಕಾರ ಈ ಕೆಲಸಕ್ಕೆ ಮುಂದಾಗಬೇಕಿದೆ.
ನಾಗರಾಜ್, ವರದಾಪುರ, ಸಾಮಾಜಿಕ ಹೋರಾಟಗಾರ.