ನೀರಿಲ್ಲದೆ ಬರಿದಾದ ಕೆರೆಯೊಡಲು 
ಜಿಲ್ಲೆ

ನೀರಿಲ್ಲದೆ ಬರಿದಾದ ಕೆರೆಯೊಡಲು

ಶಿವರಾಜ.ಎಂ

*ಅಭಿವೃದ್ಧಿಗೆ ಬೇಕಿದೆ ಕಾಯಕಲ್ಪ
*ಒತ್ತುವರಿ ತೆರವು, ಹೂಳೆತ್ತುವ ಕಾರ್ಯಕ್ಕೆ ಇದು ಸಕಾಲ


ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ತಾಲೂಕಿನಾದ್ಯಂತ ನೀರಿಲ್ಲದೆ ಕೆರೆ-ಕುಂಟೆಗಳ ಒಡಲು ಬರಿದಾಗಿದೆ. ಮತ್ತೊಂದೆಡೆ ಅನೇಕ ವರ್ಷಗಳಿಂದ ಕೆರೆಗಳ ಅಭಿವೃದ್ಧಿ ಕೆಲಸವೇ ಆಗಿಲ್ಲ. ಬಹುತೇಕ ಕಡೆಗಳಲ್ಲಿ ಕೆರೆಗಳು ಕಸದ ತೊಟ್ಟಿಗಳಾಗಿವೆ. ಇದರಿಂದ ನೀರಿನ ಕೊರತೆಯ ಜತೆಗೆ ಅಂತರ್ಜಲದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಜಲಚರಗಳಿಗೂ ಇಲ್ಲ ನೀರು: ಬಯಲುಸೀಮೆ ಭಾಗದ ದೊಡ್ಡಬಳ್ಳಾಪುರಕ್ಕೆ ಕೆರೆಗಳೇ ಜಲಮೂಲ. ಜನ-ಜಾನುವಾರು, ಪಕ್ಷಿಗಳ ದಾಹ ನೀಗಿಸುತ್ತಿದ್ದ ಕೆರೆಗಳು ಈಗ ತನ್ನೊಡಲಿನ ಜಲಚರಗಳಿಗೂ ನೀರುಣಿಸದ ದುಸ್ಥಿತಿಗೆ ತಲುಪಿವೆ. ಮಧುರೆ ಕೆರೆ ಹೊರತುಪಡಿಸಿದರೆ ತಾಲೂಕಿನ ಶೇ.99 ಕೆರೆಗಳು ಬರಡಾಗಿವೆ. ಈಗಾದರೂ, ಅಭಿವೃದ್ಧಿ ಮರೀಚಿಕೆಯಾಗಿರುವ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.
ಜಿಪಂ, ಸಣ್ಣನೀರಾವರಿ, ಮೀನುಗಾರಿಕೆ ಇಲಾಖೆ ಸೇರಿ 200ಕ್ಕೂ ಹೆಚ್ಚು ಕೆರೆಗಳು ಹಿಂದೆ ಈ ಭಾಗದ ಜನರಿಗೆ ಅನೇಕ ವರ್ಷಗಳ ಕಾಲ ಜಲಮೂಲಗಳಾಗಿದ್ದವು. ಈಗ ಈ ಕೆರೆಗಳೂ ನೀರಿಲ್ಲದೆ ಕಸದ ತೊಟ್ಟಿಗಳಾಗಿ ಮಾರ್ಪಾಡಾಗಿವೆ.
ಒತ್ತುವರಿ, ಗಿಡಗಂಟಿಗಳ ತೆರವಿಗೆ ಸಕಾಲ: ಸದ್ಯ ಬಹುತೇಕ ಕೆರೆಗಳು ಜೀವ ಕಳೆ ಕಳೆದುಕೊಂಡಿವೆ. ಕೆರೆಗಳ ಹೂಳೆತ್ತುವ ಕಾರ್ಯ, ಒತ್ತುವರಿ, ೆನ್ಸಿಂಗ್ ಸೇರಿ ಪ್ರಮುಖ ಅಭಿವೃದ್ಧಿ ಕೆಲಸಗಳ್ಯಾವೂ ನಡೆದಿಲ್ಲ. ಇದರಿಂದ ಜಲಚರಗಳೂ ಸತ್ತಿವೆ. ಇನ್ನೂ ಕೆರೆಗೆ ನೀರು ಬರುವ ಕಾಲುವೆಗಳು ದುರಸ್ತಿ ಮಾತು ದೂರವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಕೆರೆಗಳ ಸಂರಕ್ಷಣೆ ಮುಂದಾಗಬೇಕಿದೆ ಎಂಬುದು ಪರಿಸರ ಒತ್ತಾಸೆಯಾಗಿದೆ.

ಬರಡಾಗಿದೆ ಕೆರೆಗಳು ತಾಲೂಕಿನಾದ್ಯಂತ 2022ರಲ್ಲಿ ಭರ್ಜರಿ ಮಳೆಯಿಂದ ನಗರದ ನಾಗರಕೆರೆ, ಮುತ್ತೂರು ಕೆರೆಗಳು ಸೇರಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಕೆರೆಗಳು ತುಂಬಿ, ಕೋಡಿ ಹರಿದಿದ್ದವು. ಆದರೆ 2023ರಲ್ಲಿ ಮಳೆ ಸಂಪೂರ್ಣವಾಗಿ ಕೊರತೆಯಾದ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರು ಹರಿದು ಬರಲಿಲ್ಲ. ಇದರಿಂದ ಕೆರೆಗಳಲ್ಲಿ ಅಳಿದು, ಉಳಿದ ನೀರು ಬಿಟ್ಟರೆ ಬಹುತೇಕ ಕೆರೆಗಳು ಮೈದಾನದಂತೆ ಕಾಣುತ್ತಿವೆ. ಕೆರೆ, ಕುಂಟೆಗಳಲ್ಲಿ ನೀರು, ಆಮ್ಲಜನಕದ ಕೊರತೆಯಿಂದ ಮೀನುಗಳು ಸಾಯುತ್ತಿವೆ.

ತ್ಯಾಜ್ಯದ ಡಂಪಿಂಗ್ ಯಾರ್ಡ್: ಕುಡಿಯುವ ನೀರು, ಬಳಕೆಯ ನೀರಿಗೆ ನೆರವಾಗುತ್ತಿದ್ದ ಕೆರೆಗಳು ಸದ್ಯ ಕಸ ಹಾಕುವ ಡಂಪಿಂಗ್ ಯಾರ್ಡ್‌ಗಳಾಗಿ ಬದಲಾಗಿವೆ. ನಾಗರಕೆರೆ, ಮುತ್ತೂರು ಕೆರೆಗಳಿಗೆ ಮ್ಯಾನ್‌ಹೋಲ್‌ಗಳ ಮೂಲಕ ಕಲುಷಿತ ನೀರು ಹರಿಯುತ್ತಿದ್ದು, ದೊಡ್ಡತುಮಕೂರು ಭಾಗದ ಕೆರೆಗಳಿಗೆ ಬಾಶೆಟ್ಟಿಹಳ್ಳಿ ಕೈಗಾರಿಕೆ ತ್ಯಾಜ್ಯ, ನಗರಸಭೆ ಕಲುಷಿತ ನೀರು ಸೇರುತ್ತಿದೆ. ಈ ಭಾಗದ ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಈ ಬಗ್ಗೆ ನಿರಂತರವಾದ ಹೋರಾಟಗಳು ಕೂಡ ಅರ್ಕಾವತಿ ನದಿ ಪಾತ್ರದ ಕೆರೆಗಳಲ್ಲಿ ನಡೆಯುತ್ತಿವೆ.


ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯ ಆಗಲೇಬೇಕು. ಕೆರೆಗಳ ಪ್ರದೇಶದಲ್ಲಿ ಹಸಿರು ಕಡಿಮೆಯಾಗುತ್ತಿದ್ದು, ನೀರನ್ನು ತಡೆದಿಟ್ಟುಕೊಳ್ಳಲು ಹಸಿರು ಸಸ್ಯಗಳಿಗೆ ಉತ್ತೇಜನ ನೀಡಬೇಕು. ಜತೆಗೆ ಅಂತರ್ಜಲದ ಬಳಕೆ ಕೂಡ ಕಡಿಮೆ ಮಾಡಬೇಕು.
ಲೋಹಿತ್, ಹಿರಿಯ ಯೋಜನಾಕಾರಿ, ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ಸಂಸ್ಥೆ