ಸಂಡೂರು: ತಾಲೂಕಿನ ಬೊಮ್ಮಘಟ್ಟ ಗ್ರಾಪಂ ವ್ಯಾಪ್ತಿಯ ದೇವರ ಬುಡ್ಡೆನಹಳ್ಳಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಲ್ಲಿನ ಕೆರೆ ಪುನರುಜ್ಜೀವನ ಕಂಡಿದೆ.
ಇದನ್ನೂ ಓದಿ: ಜಲ ಸಂಗ್ರಹಗಾರ ನಿರ್ಮಾಣ ಕೈಬಿಡಲು ಆಗ್ರಹ
ಸುಮಾರು 200 ವರ್ಷ ಹಿಂದೆ ಈ ಕೆರೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ದನ-ಕರು, ಕುರಿ, ಎಮ್ಮೆ, ಪಕ್ಷಿಗಳ ದಾಹ ತೀರಿಸುವ ಜತೆಗೆ ಜಮೀನಿಗೆ ನೀರನ್ನು ಬಳಸಲಾಗುತ್ತಿತ್ತು.
21.37 ಎಕರೆ ವಿಸ್ತೀರ್ಣದ ಈ ಕೆರೆ ಹೂಳು-ಮಣ್ಣಿನಿಂದ ತುಂಬಿ, ಕಲ್ಲು-ಗುಂಡುಗಳು ಮೇಲೆದ್ದು, ಗಿಡ-ಗಂಟಿಗಳು ಬೆಳೆದಿದ್ದವು.
ಈಗ ಕೆರೆಯ ಹೂಳನ್ನು ಸಂಸ್ಥೆಯವರು ತೆಗೆಸುವ ಮೂಲಕ ರೈತರು ಮತ್ತು ಜಾನುವಾರುಗಳಿಗೆ ಅನುಕೂಲ ಮಾಡಿಕೊಟ್ಟಿದೆ. ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ರೈತರೊಂದಿಗೆ ಜತೆಗೂಡಿ 11.75 ಲಕ್ಷ ರೂ. ವೆಚ್ಚದಲ್ಲಿ ಕೆರೆ ಪುನರುಜ್ಜೀವನ ಮಾಡಲಾಗಿದೆ. ಇದೀಗ ಕೆರೆಯಲ್ಲಿ ಅಂದಾಜು 14 ಅಡಿ ನೀರು ಸಂಗ್ರಹವಾಗಲಿದೆ ಎನ್ನುತ್ತಾರೆ ಪ್ರಗತಿಪರ ರೈತ ರುದ್ರಪ್ಪ.
‘ಸಂಸ್ಥೆಗೆ ಸಹಕಾರ ನೀಡಿದ್ದು, ಶೇ.90 ಹೂಳನ್ನು ಜಮೀನಿನಲ್ಲಿ ಹಾಕಲಾಗಿದೆ’ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಹುಲುಕುಂಟೆಪ್ಪ. ‘ಸಂಸ್ಥೆಯವರ ಕಾರ್ಯ ಶ್ಲಾಘನೀಯ. ಅಂತರ್ಜಲಮಟ್ಟ ಹೆಚ್ಚಿಸಲು ಮತ್ತು ಮೀನು ಸಾಕಣೆಗೆ ಮೂರು ವರ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಜನರು, ಜಾನುವಾರು ಮತ್ತು ಜಮೀನಿಗೆ ಅನುಕೂಲವಾಗಿದೆ’ ಎಂದಿದ್ದಾರೆ ಸಮಿತಿ ಉಪಾಧ್ಯಕ್ಷ ಹುಲುಗಪ್ಪ.
ಕೆರೆ ಹೂಳು ತೆರವಿಗೆ 70 ಲಕ್ಷ ರೂ.ಗಿಂತ ಹೆಚ್ಚು ಹಣ ಖರ್ಚಾಗಿದೆ. ಮೊದಲಿಗಿಂತ ಈಗ ನೀರು ಸಾಕಷ್ಟು ತುಂಬಿದೆ. ಅಂದಾಜು ಐದು ಅಡಿಯಷ್ಟು ತುಂಬಬೇಕಿದೆ. ಕೆರೆ ಭರ್ತಿಯಾಗುವ ಭರವಸೆಯಿದೆ.| ರುದ್ರಪ್ಪ, ಎಸ್‌ಕೆಡಿಆರ್‌ಡಿಪಿ ಅಧಿಕಾರಿ