ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಕೆರೆಯ ನೀರನ್ನು ಸ್ವಚ್ಛಗೊಳಿಸುವ ಕಾರ್ಯ ಒಂದು ಕಡೆ ನಡೆದಿದ್ದರೆ ಇನ್ನೊಂದೆಡೆ ವಿವಿಧ ಭಾಗಗಳಿಂದ ಹರಿದು ಬರುವ ಒಳಚರಂಡಿ ಕೊಳಚೆ ಕೆರೆ ಸೇರುತ್ತಿದೆ.
ಉಣಕಲ್ಲ ಶ್ರೀನಗರ ಕ್ರಾಸ್ ಬಳಿ ಮಳೆ ನೀರು ಹರಿದು ಹೋಗಲು ಇರುವ ಜಾಗದಲ್ಲಿ ಒಳಚರಂಡಿ ಕೊಳಕು ಬಂದು ಸೇರುತ್ತಿದೆ. ಕಳೆದ ಹಲವು ದಿನಗಳಿಂದ ಕೊಳಚೆಯು ಹರಿದು ಬರುತ್ತಿದ್ದರೂ ಇದನ್ನು ತಡೆಯುವ ಗೋಜಿಗೆ ಮಹಾನಗರ ಪಾಲಿಕೆ ಹೋಗಿಲ್ಲ. ಹೀಗಾಗಿ ಕೆರೆ ಆವರಣ ಗಬ್ಬೆದ್ದು ಹೋಗಿದೆ.
ಕೊಳಕು ಬಂದು ಸೇರುವ ಜಾಗದಲ್ಲಿ ನಿಲ್ಲುವುದಕ್ಕೂ ಆಗುತ್ತಿಲ್ಲ. ಗಬ್ಬು ವಾಸನೆ ಮೂಗಿಗೆ ಅಡರುತ್ತದೆ. ವಾಯು ವಿಹಾರ ಮಾಡಲು ಉದ್ಯಾನಕ್ಕೆ ಬರುವವರು ಆರೋಗ್ಯದ ಬದಲು ಅನಾರೋಗ್ಯ ತೆಗೆದುಕೊಂಡು ಹೋಗುವಂತಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಕೆರೆ ಸ್ವಚ್ಛತೆ ಹಾಗೂ ಉದ್ಯಾನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೆರೆಯಲ್ಲಿ ಬೆಳೆಯುತ್ತಿರುವ ಪಿಶಾಚಿ ತಾವರೆ ಕಳೆ ನಿರ್ಮೂಲನೆ ಮಾಡಲಾಗುತ್ತಿದ್ದು, ಇದಕ್ಕಾಗಿ ಮೊದಲು ಕೆರೆ ನೀರನ್ನು ಸ್ವಚ್ಛ ಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ.
ನೀರು ಸ್ವಚ್ಛತೆಗೆ ಅಲ್ಲಲ್ಲಿ ಜಲಸಸ್ಯಗಳನ್ನು ಹಾಕಲಾಗಿದೆ. ಕಾರಂಜಿಗಳ ಮೂಲಕ ನೀರು ಚಿಮ್ಮಿಸಿ ಆಮ್ಲಜನಕ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.
ಆದರೆ, ಕೆರೆಗೆ ಕೊಳಕು ನೀರು ಬಂದು ಸೇರುವುದನ್ನು ತಡೆಯದ ಹೊರತು ಯಾವುದೇ ಅಭಿವೃದ್ಧಿ ಕಾರ್ಯ, ಕೆರೆ ಸ್ವಚ್ಛತೆ ಮಾಡಿದ್ದು ಉಪಯೋಗಕ್ಕೆ ಬರುವುದಿಲ್ಲ. ಮಾಡಿದ ಕೆಲಸವೆಲ್ಲ ವ್ಯರ್ಥವಾಗಿ ಹೋಗುತ್ತಿದೆ.
ಕಳೆದು ನಾಲ್ಕೆ$ದು ವರ್ಷದಿಂದ ಸ್ವಚ್ಛತೆ ಕೆಲಸ ನಡೆದಿದೆ. ಕೆರೆಯಲ್ಲಿನ ಜಲಕಳೆ ಕಿತ್ತು ಹಾಕಲಾಗಿದೆ. ನೀರು ಶುದ್ಧೀಕರಣ ಮಾಡಲಾಗುತ್ತಿದೆ. ಆದರೆ, ಅದೇ ವೇಗದಲ್ಲಿ ಕೊಳಚೆ ನೀರು ಕೆರೆ ಆವರಿಸುತ್ತಿರುವುದು ಅಭಿವೃದ್ಧಿಯನ್ನು ಅಣಕಿಸುತ್ತಿದೆ.
ಈ ಮೊದಲು ಭೈರಿದೇವರಕೊಪ್ಪ ಬಳಿಯಿಂದ ಬರುವ ಕೊಳಚೆ ನಿಲ್ಲಿಸಲು ಪ್ರಯತ್ನ ಮಾಡಲಾಯಿತು. ಇದೀಗ ಉಣಕಲ್ಲ ಶ್ರೀನಗರ, ತಾಜನಗರ, ಇತರ ಕಡೆಗಳಿಂದ ಬರುವ ಒಳಚರಂಡಿ ನೀರು ಅವಾಂತರ ಸೃಷ್ಟಿ ಮಾಡುತ್ತಿದೆ.
ಕೆರೆ ಸ್ವಚ್ಛವಾಗಬೇಕಾದರೆ ಮೊದಲು ಕೊಳಚೆ ಸೇರುವುದನ್ನು ಬಂದ್ ಮಾಡಬೇಕು. ಆ ನಂತರವೇ ಅಭಿವೃದ್ಧಿಗೆ ಒಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಕೋಟ್ಯಂತರ ರೂಪಾಯಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.