ಚಳ್ಳಕೆರೆ: ತಾಲೂಕಿನ ಬೊಮ್ಮಸಮುದ್ರ ಕೆರೆ ಒತ್ತುವರಿ ತೆರವು, ಅಕ್ರಮ ಮಣ್ಣು ಸಾಗಾಣಿಕೆ ತಡೆಯುವುದು ಸೇರಿ ಕೆರೆಯಂಗಣದಲ್ಲಿ ಅರಣ್ಯೀಕರಣದ ಮೂಲಕ ಸಂರಕ್ಷಣೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಉತ್ತಮ ಮಳೆಯಾಗಿರುವುದರಿಂದ ನಗರಂಗೆರೆ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಬೊಮ್ಮಸಮುದ್ರ ಕೆರೆಗೆ ಬರುತ್ತಿದ್ದು, ಸ್ವಲ್ಪ ಮಟ್ಟಿಗೆ ಕೆರೆ ತುಂಬಿಕೊಂಡಿದೆ.
ಒಟ್ಟು 196 ಎಕರೆ ವಿಸ್ತೀರ್ಣವಿರುವ ಬೊಮ್ಮಸಮುದ್ರ ಕೆರೆಯಲ್ಲಿ ಪ್ರತಿನಿತ್ಯ ಜೆಸಿಬಿ, ಲಾರಿ ಹಾಗೂ ಟ್ರಾೃಕ್ಟರ್ ಬಳಸಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತಿದೆ. ಕೆರೆ ಅಂಗಳದಲ್ಲಿ ಜಾಲಿ ಬೆಳೆದು ನಿಂತಿದೆ. ಕೆರೆ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೊಮ್ಮಸಮುದ್ರ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಆದರೆ, ಜಿಲ್ಲಾ ಪಂಚಾಯಿತಿ ನಿರ್ವಹಣೆ ಮಾಡುತ್ತಿದೆ. ಹೀಗಾಗಿ, ಸಮಗ್ರ ಅಭಿವೃದ್ಧಿಯಾಗಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ.
-ರವಿಕುಮಾರ್ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಚಳ್ಳಕೆರೆ.