ನವಲಗುಂದ: ಶನಿವಾರ ಸುರಿದ ಮಳೆಗೆ ತಾಲೂಕಿನ ಬಳ್ಳೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಕೆರೆಯಂತಾಗಿದೆ.
ಪಕ್ಕದ ರಸ್ತೆ ಎತ್ತರದಲ್ಲಿ ಇರುವುದರಿಂದ ಸುರಿದ ಮಳೆ ನೀರು ಶಾಲೆ ಆವರಣದೊಳಗೆ ಬಂದು ಸಂಗ್ರಹವಾಗುತ್ತಿದೆ. ಇದು ಮೊದಲ ಸಲವಲ್ಲ. ಮಳೆ ಬಂದಾಗಲೊಮ್ಮೆ ಈ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
1ರಿಂದ 8ನೇ ತರಗತಿವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, 220ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಮಳೆಗಾಲದಲ್ಲಿ ಇದೇ ರೀತಿ ಮಳೆ ಸುರಿದು 2 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಪರಿಕರಗಳು ಹಾಳಾಗಿದ್ದವು.
ಎರಡು ಹೊಸ ಸೇರಿ ಒಟ್ಟು 10 ಕೊಠಡಿಗಳಿವೆ. ಹಳೆಯ ಕೊಠಡಿಗಳು ಮಳೆ ನೀರು ಹಿಡಿದು ಜಿನುಗುತ್ತಿರುತ್ತವೆ. ಏನಾದರೂ ಅನಾಹುತ ಆದರೆ ಹೇಗೆ ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಹೊಸ ಕಟ್ಟಡ ನಿರ್ಮಿಸಬೇಕು. ಮಳೆ ನೀರು ಶಾಲೆ ಆವರಣದಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಪಂ ಸದಸ್ಯ ಉದಯಗೌಡ ಪಾಟೀಲ ತಿಳಿಸಿದ್ದಾರೆ.